News Headlines 01-05-25 | DKS, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಟಿ ರವಿ ದೂರು; Congress ವಿರುದ್ಧ HDK 60 ಪರ್ಸೆಂಟ್ ಕಮಿಷನ್ ಆರೋಪ; Ambedkar ಹಾಡು ಹಾಕಿದ್ದಕ್ಕೆ ಹಲ್ಲೆ!

News Headlines 01-05-25 | DKS, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಟಿ ರವಿ ದೂರು; Congress ವಿರುದ್ಧ HDK 60 ಪರ್ಸೆಂಟ್ ಕಮಿಷನ್ ಆರೋಪ; Ambedkar ಹಾಡು ಹಾಕಿದ್ದಕ್ಕೆ ಹಲ್ಲೆ!

1. ಡಿಕೆ, ಲಕ್ಷ್ಮೀ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಟಿ ರವಿ ದೂರು

ವಿಧಾನಪರಿಷತ್​ ಸದಸ್ಯ ಸಿ.ಟಿ ರವಿ ವರ್ಸಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರದ ಪ್ರಕರಣ ಮುಂದುವರೆದಿದ್ದು ದೂರು, ಪ್ರತಿದೂರುಗಳು ದಾಖಲಾಗುತ್ತಿವೆ. ಇದೀಗ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್​ ಮೂಲಕ 13 ಪುಟಗಳ ದೂರನ್ನು ಸಿಟಿ ರವಿ ಸಲ್ಲಿಸಿದ್ದು, ಬಂಧನದ ವೇಳೆ ಪೊಲೀಸ್ ದೌರ್ಜನ್ಯ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಿಸಿದ್ದಾರೆ. ದೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಕೂಡ ಉಲ್ಲೇಖಿಸಿದ್ದಾರೆ.

2. ಜೆಡಿಎಸ್ ಮುಖಂಡ ಗೋಲ್ಡ್ ವೆಂಕಟೇಶ್ ಬರ್ಬರ ಹತ್ಯೆ: ಇಬ್ಬರ ಹತ್ಯೆ

ಜೆಡಿಎಸ್ ಮುಖಂಡ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತರನ್ನು ಧನು ಅಲಿಯಾಸ್ ಧನರಾಜ್ ಹಾಗೂ ಸತೀಶ್ ಎಂದು ಗುರುತಿಸಲಾಗಿದೆ. ಹಳೇ ದ್ವೇಷ ಹಿನ್ನಲೆ ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅರವಿಂದ್ ಎಂಬವರಿಗೆ ಹಣ ನೀಡಲಿಲ್ಲ ಎಂದು ಬಾರ್ ಒಂದರಲ್ಲಿ ಮೃತ ವೆಂಕಟೇಶ್ ಹಾಗೂ ಧನರಾದ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಧನುಗೆ ವೆಂಕಟೇಶ್ ಹಿಗ್ಗಾ ಮುಗ್ಗಾ ಹೊಡೆದಿದ್ದ ಎನ್ನಲಾಗಿದೆ. ನಂತರ ಧನು ಪರವಾಗಿ ರಾಜೀ ಮಾಡಲು ಮುಂದಾಗಿದ್ದ ಸತೀಶ್‍ಗೂ ವೆಂಕಟೇಶ್ ಹೊಡೆದು ಕಳಿಸಿದ್ದರು. ಇದರಿಂದ ಆರೋಪಿಗಳು ಕೊಲೆ ಮಾಡಿದ್ದಾರೆ.

3. ಪ್ರತಿಯೊಬ್ಬರು ಕಲಾಕೃತಿಯನ್ನು ಖರೀದಿಸಿ: ಸಿದ್ದರಾಮಯ್ಯ

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಪ್ರತಿ ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ದೇಶ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ. ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

4. ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ 60 ಪರ್ಸೆಂಟ್ ಕಮಿಷನ್ ಆರೋಪ

ರಾಜ್ಯ ರಾಜಕಾರಣದಲ್ಲಿ ಮತ್ತೆ ಪರ್ಸೆಂಟೇಜ್ ವಿಚಾರ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಈಗ ಶೇ. 60ರಷ್ಟು ಕಮಿಷನ್ ತೆಗೆದುಕೊಳ್ಳಲಾಗ್ತಿದೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಚಿವರಿಗೆ ಇಂತಿಷ್ಟು ಕಮಿಷನ್ ಎಂದು ನಿಗದಿಪಡಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗುತ್ತಿಗೆದಾರರೇ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೆಲ ಜನರಿಗೆ ಪ್ರಯೋಜನವಾಗುತ್ತಿರುವುದನ್ನು ಒಪ್ಪಿಕೊಂಡ ಕುಮಾರಸ್ವಾಮಿ, ಬಸ್ ಪ್ರಯಾಣ ದರ ಏರಿಕೆ ಮತ್ತಿತರ ಆರ್ಥಿಕ ಹೊಡೆತದ ಕ್ರಮಗಳು ಹಂತ ಹಂತವಾಗಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಪ್ರಕ್ರಿಯೆ ಭಾಗವಾಗಿರಬಹುದು ಎಂದರು.

5. ಡಾ.ಬಿಆರ್ ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ದಲಿತನ ಮೇಲೆ ಮಾರಣಾಂತಿಕ ಹಲ್ಲೆ

ಹಾಲು ಸರಬರಾಜು ಮಾಡುವ ವ್ಯಾನ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಹಾಡುಗಳನ್ನು ಜೋರಾಗಿ ಹಾಕಿದ್ದಕ್ಕಾಗಿ 19 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದಾಗಿ ದೀಪು ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದನಹಳ್ಳಿ ಗ್ರಾಮದಲ್ಲಿ ದೀಪು ಮತ್ತು ಹಾಲಿನ ವ್ಯಾನ್ ಚಾಲಕ ನರಸಿಂಹ ಮೂರ್ತಿ ಮೇಲೆ ಆರೋಪಿಗಳಾದ ಆರ್‌ಪಿಎಫ್ ಸಿಬ್ಬಂದಿ ಚಂದ್ರಶೇಖರ್ ಮತ್ತು ನರಸಿಂಹರಾಜು ಎಂಬುವರು ಹಲ್ಲೆ ನಡೆಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಐಐಎಂಬಿಯಲ್ಲಿ ಎಂಬಿಎ ವಿದ್ಯಾರ್ಥಿ 28 ವರ್ಷದ ಗುಜರಾತ್ ಮೂಲದ ನಿಲಯ್ ಪಟೇಲ್ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ನಿಲಯ್ ಮಧ್ಯರಾತ್ರಿ ವಾಶ್‌ರೂಮ್‌ಗೆ ಹೋದಾಗ ಬಿದ್ದಿರಬಹುದೆಂಬ ಶಂಕೆಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com