
ಬೆಂಗಳೂರು: ಪರಿಚಿತ ಯುವತಿಗೆ ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಹಾಸನ ಜಿಲ್ಲೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಮೇಲೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರದ ನಿವಾಸಿ ಸೋಮಶೇಖರ್ ಅಲಿಯಾಸ್ ಜಿಮ್ ಸೋಮನ ಮೇಲೆ ಆರೋಪ ಕೇಳಿ ಬಂದಿದ್ದು, ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ ಫ್ಲ್ಯಾಟ್‌ವೊಂದಕ್ಕೆ ಕರೆದೊಯ್ದು ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ 26 ವರ್ಷದ ಯುವತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತೆಗೆ ಮದುವೆ ನಿಶ್ಚಯವಾಗಿತ್ತು. ಅದೇ ವೇಳೆಯಲ್ಲಿ ಸಂತ್ರಸ್ತೆಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಹೀಗಾಗಿ ₹6 ಲಕ್ಷ ಆರ್ಥಿಕ ಸಹಾಯ ಮಾಡುವಂತೆ ಸೋಮಶೇಖರ್ ಬಳಿ ಸಂತ್ರಸ್ತೆ ಕೇಳಿಕೊಂಡಿದ್ದರು.
2024ರ ಅಕ್ಟೋಬರ್‌ನಲ್ಲಿ ಸಂತ್ರಸ್ತೆ ಪಿ.ಜಿ ಬಳಿ ತೆರಳಿದ್ದ ಸೋಮಶೇಖರ್, ಹಣ ಕೊಡುವುದಾಗಿ ಆಕೆಯನ್ನು ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿ ಇರುವ ತಮ್ಮ ಫ್ಲ್ಯಾಟ್‌ವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಆರೋಪಿಸಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಆರೋಪಿಯ ಸುಳಿವು ಲಭಿಸಿದ್ದು, ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು.
ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ಸೇರಿ ಇತರೆ ವ್ಯವಹಾರಗಳಲ್ಲಿ ತೊಡಗಿದ್ದ ಜಿಮ್ ಸೋಮ, ರಾಜಕೀಯದಲ್ಲೂ ಸಕ್ರಿಯವಾಗಿದ್ದ. 2018ರಲ್ಲಿ ಸಕಲೇಶಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳಿಂದ ಆತ ಪರಾಜಿತನಾಗಿದ್ದ.
Advertisement