
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಂಬಂಧಿಸಿದಂತೆ ವಿಧಾನಪರಿಷತ್ತಿನಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧದ ಪೊಲೀಸ್ ದೌರ್ಜನ್ಯ ಆರೋಪವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ರಾಜ್ಯಪಾಲರು, ಬೆಳಗಾವಿ ಪೊಲೀಸ್ ಆಯುಕ್ತ ಮತ್ತು ಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿ.ಟಿ ರವಿಗೆ ಭದ್ರತೆ ನೀಡುವ ಬೇಡಿಕೆ ಕುರಿತು ಗಮನ ಹರಿಸಬೇಕು. ನಿಮ್ಮಂತೆಯೇ ಸಿಟಿ ರವಿ ಜನಪ್ರತಿನಿಧಿಯಾಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಡಿಸೆಂಬರ್ 24ರಂದು ಸಂಭವಿಸಿದ ಘಟನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರ ನಿಯೋಗವೊಂದು ದೂರು ನೀಡಿದ ಬಳಿಕ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಈ ಪತ್ರದ ಕುರಿತು ರಾಜ್ಯ ಸರ್ಕಾರ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರವಿ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಸಿಟಿ ರವಿ ಅವರನ್ನು ಬಂಧಿಸಿದ ಬಳಿಕ ಅವರಿಗೆ ಆಹಾರ ನೀಡದೆ ರಾತ್ರಿ ಇಡೀ ಪೊಲೀಸರು ಜೀಪ್ ನಲ್ಲಿ ಸುತ್ತಾಡಿಸಿದ್ದಾರೆ. ಕಬ್ಬಿನ ಗದ್ದೆ ಸೇರಿದಂತೆ ನಿರ್ಜನ ಪ್ರದೇಶಗಳಲ್ಲಿ ಸುಮಾರು 400 ಕಿ ಮೀಟರ್ ಸುತ್ತಾಡಿಸಿದ್ದಾರೆ. ಅಲ್ಲದೆ ತಲೆಗೆ ಗಾಯವಾದರೂ ಯಾವುದೇ ಚಿಕಿತ್ಸೆ ನೀಡಿರಲಿಲ್ಲ ಎಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದರು.
ಬಫೂನ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ರವಿ ಅವರಿಗೂ ಸೂಕ್ತ ಭದ್ರತೆ ಕಲ್ಪಿಸಬೇಕು, ಪಾರದರ್ಶಕವಾಗಿ ತನಿಖೆ ನಡೆಸಬೇಕು. ರವಿ ಅವರನ್ನು ಠಾಣೆಗೆ ಕರೆದೊಯ್ದ ಸಂದರ್ಭದಲ್ಲಿ ಪ್ರತಿನಿಮಿಷಕ್ಕೂ ಪೊಲೀಸ್ ಆಯುಕ್ತರಿಗೆ ಕರೆ ಬರುತ್ತಿದುದ್ದನ್ನು ನಾನೇ ನೋಡಿದ್ದೇನೆ. ಅವರಿಗೆ ಕರೆ ಮಾಡುತ್ತಿದ್ದವರು ಯಾರು? ಅವರು ಸಿಎಂ ಅವರೇ ಅಥವಾ ಡಿಸಿಎಂ ಅವರೇ ಎಂಬುದು ಪಾರದರ್ಶಕ ತನಿಖೆಯಿಂದ ಹೊರಬರಬೇಕು ಎಂದು ವಿಪಕ್ಷ ನಾಯಕ ಆರ್, ಅಶೋಕ್ ಒತ್ತಾಯಿಸಿದ್ದಾರೆ.
Advertisement