ಕೇಂದ್ರ ಸರ್ಕಾರ ಜನವರಿ ತಿಂಗಳಿಗೆ ರಾಜ್ಯಗಳಿಗೆ ಒಟ್ಟು 1,73,030 ಕೋಟಿ ರೂ ಜಿಎಸ್ಟಿ ಹಣವನ್ನು ಹಂಚಿಕೆ ಮಾಡಿದೆ. ಈ ತಿಂಗಳು ಹಂಚಿಕೆ ಹಣ ಎರಡು ಪಟ್ಟು ಹೆಚ್ಚಾಗಿದೆ. ರಾಜ್ಯ ಸರ್ಕಾರಗಳಿಗೆ ಬಂಡವಾಳ ವೆಚ್ಚ ಅಧಿಕಗೊಳಿಸಲು ಸಹಾಯಕವಾಗಿ ಹೆಚ್ಚಿನ ತೆರಿಗೆ ಹಣ ನೀಡಲಾಗಿದೆ. ಈ ತಿಂಗಳು ರಾಜ್ಯಗಳಿಗೆ ನೀಡಿರುವ ಜಿಎಸ್ಟಿ ಹಂಚಿಕೆಯಲ್ಲಿ ಅತಿಹೆಚ್ಚು ಪಾಲು ಉತ್ತರ ಪ್ರದೇಶಕ್ಕೆ ಸಿಕ್ಕಿದ್ದರೆ, ಕರ್ನಾಟಕಕ್ಕೆ 6,310 ಕೋಟಿ ರೂಪಾಯಿ ಸಿಕ್ಕಿದೆ. 15ನೇ ಹಣಕಾಸು ಆಯೋಗ ಜಿಎಸ್ಟಿ ತೆರಿಗೆ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲು ಸೂತ್ರ ನೀಡಿದೆ. ಅದರ ಪ್ರಕಾರ ಹಂಚಿಕೆ ಮಾಡಲಾಗುತ್ತದೆ.
ಬಸ್ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದ ಸರ್ಕಾರ ಈಗ ಬಿಯರ್ ದರ ಏರಿಸುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ. ಅಬಕಾರಿ ಆದಾಯದ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರೀಮಿಯಂ ಬಿಯರ್ ಬೆಲೆ 10 ರಿಂದ 50 ರೂಪಾಯಿಗಳವರೆಗೆ ಹೆಚ್ಚಾಗಲಿದೆ. ಭಾರತೀಯ ನಿರ್ಮಿತ ಮದ್ಯದ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಈ ಪರಿಷ್ಕೃತ ದರ ಜನವರಿ 20 ರಿಂದ ಜಾರಿಗೆ ಬರಲಿದೆ. ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟವನ್ನು ರಾಜ್ಯದಲ್ಲಿ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಏರಿಕೆಯನ್ನು ವಿರೋಧಿಸಿದೆ. ಕಳೆದ ಎರಡು ವರ್ಷಗಳಲ್ಲಿ ಬಿಯರ್ ಮಾರಾಟ ದ್ವಿಗುಣಗೊಂಡಿರುವುದನ್ನು ಇಲ್ಲಿ ಗಮನಿಸಬಹುದು.
ದಕ್ಷಿಣ ಭಾರತದ ಮೊದಲ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ. ಐಸಿಎಂಆರ್ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ(ಐಆರ್‌ಡಿಎಲ್) ಸ್ಥಾಪಿಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಆಯ್ಕೆ ಮಾಡಿದೆ ಎಂದು ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ನೆರವಾಗಲಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜನವರಿ 16 ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯ ಸ್ಥಳವನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿನ ಹೊರವಲಯದ ನಂದಿ ಬೆಟ್ಟಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಾಲ್ಕುವರೆ ಗಂಟೆ ಪ್ರಯಾಣದ ಸಮಯ, ಎಂಎಂ ಹಿಲ್ಸ್‌ನಲ್ಲಿನ ಕಳಪೆ ರಸ್ತೆ ಸ್ಥಿತಿ ಮತ್ತು ಮೂಲಸೌಕರ್ಯ ಸೇರಿದಂತೆ MM hills ನಲ್ಲಿ ಸಂಪುಟ ಸಭೆ ನಡೆಸಲು ಹಲವು ಅಡಚಣೆಗಳು ಎದುರಾಗಿದ್ದರಿಂದ ಸ್ಥಳ ಬದಲಾವಣೆ ಮಾಡಲಾಗಿದೆ. ಸರ್ಕಾರವು ಎಂಎಂ ಹಿಲ್ಸ್‌ನಲ್ಲಿ ಸಂಪುಟ ಸಭೆ ನಡೆಸುವ ಆಲೋಚನೆಯನ್ನು ಕೈಬಿಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ "ಇಲ್ಲ ನಾವು ಆ ಆಲೋಚನೆಯನ್ನು ಕೈಬಿಟ್ಟಿಲ್ಲ, ಮುಂದಿನ ಬಾರಿ ನಾವು ಅಲ್ಲಿಯೇ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ (ಎಬಿ-ಪಿಎಂಜೆಎವೈ) ಯೋಜನೆಯಡಿ ಚಿಕಿತ್ಸೆ ನಿರಾಕರಿಸಿದ್ದರಿಂದ ಮನನೊಂದು 72 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. 72 ವರ್ಷದ ವ್ಯಕ್ತಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನಿರಾಕರಿಸಿದ ನಂತರ ಮನನೊಂದು ಡಿಸೆಂಬರ್ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದಾಯದ ಮಿತಿಗಳಿಲ್ಲದೆ 70 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೂ ಎಬಿ-ಪಿಎಂಜೆಎವೈ ಅಡಿ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಸ್ತರಿಸಿರುವ ಆಯುಷ್ಮಾನ್ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
Advertisement