ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅದೃಷ್ಟವಶಾತ್ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕಾರಿ ನಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಪಾಯದಿಂದ ಪಾರಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಮಾತನಾಡಿ, “ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್ 1 ಮತ್ತು ಎಲ್ 4 ಮೂಳೆ ಮುರಿದಿದೆ. ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಮೆದುಳು ಬಾವು ಬಂದಿದೆ. ಹೀಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗುತ್ತಾರೆ” ಎಂದು ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧ ಪೊಲೀಸರು ಬಂಧಿಸಿರುವ ವ್ಯಕ್ತಿಯು ನಿರಪರಾಧಿಯಾಗಿದ್ದು, ಘಟನೆಯನ್ನು ನ್ಯಾಯಯುತವಾಗಿ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅಮಾಯಕನೊಬ್ಬನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ಆತನನ್ನೇ ಆರೋಪಿ ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ವಿಪಕ್ಷದ ನಾಯಕ ಆರ್ ಅಶೋಕ ಕೂಡ ತನಿಖೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದು. ಬಂಧಿತ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಮಾನಸಿಕವಾಗಿ ಅಸ್ಥಿರವಾಗಿರುವ ವ್ಯಕ್ತಿ ಒಂದು ದಶಕದಿಂದ ಸಂಸ್ಥೆಯೊಂದರಲ್ಲಿ ಹೇಗೆ ಕೆಲಸ ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.
ಸುಮಾರು 32 ಸಾವಿರ ಕೋಟಿ ರೂ. ಬಾಕ್ ಬಿಲ್ ಬಿಡುಗಡೆ ಸಂಬಂಧ ರಾಜ್ಯ ಸರಕಾರ ಮತ್ತು ಗುತ್ತಿಗೆದಾರರ ಸಂಘದ ನಡುವಿನ ಸಂಘರ್ಷ ಮತ್ತೆ ಶುರುವಾಗಿದೆ. ಬಾಕಿ ಬಿಲ್‌ಗಳನ್ನು ತೆರವುಗೊಳಿಸುವಲ್ಲಿ ವಿಳಂಬ ಮತ್ತು ಗುತ್ತಿಗೆ ನೀಡುವಲ್ಲಿ ಅಕ್ರಮಗಳ ಆರೋಪದ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಏಳು ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮತ್ತು ಆರ್‌ಡಿಆರ್‌ಪಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಏಳು ಸಚಿವರಿಗೆ ಸಂಘ ಪತ್ರ ಬರೆದಿದ್ದು, ಸರ್ಕಾರ ಹಿರಿತನವನ್ನು ಪರಿಗಣಿಸುತ್ತಿಲ್ಲ. ಶಾಸಕರು ಶಿಫಾರಸು ಮಾಡಿದ ಬಿಲ್‌ಗಳನ್ನು ಇಲಾಖೆಗಳು ತೆರವುಗೊಳಿಸುತ್ತಿವೆ ಎಂದು ಆರೋಪಿಸಿದೆ.
ಎಲ್ಲಾ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಕರ ಸಂಕ್ರಾಂತಿಗೆ ಬಂಫರ್ ಗಿಫ್ಟ್ ನೀಡಿದ್ದಾರೆ. ಶಾಸಕರಿಗೆ ಸಿಎಂ ತಲಾ 10 ಕೋಟಿ ಅನುದಾನ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಿಎಲ್ ಪಿ ಸಭೆಯಲ್ಲಿ ಶಾಸಕರಿಗೆ ಅನುದಾನವನ್ನು ನೀಡುವ ಘೋಷಣೆ ಮಾಡಿದ್ದಾರೆ. 'ಭಾನುವಾರವಷ್ಟೇ ಕಡತಕ್ಕೆ ಸಹಿ ಹಾಕಿದ್ದೇನೆ. ಕಾಂಗ್ರೆಸ್ ಶಾಸಕರು ಮಾತ್ರವಲ್ಲ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ರು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲ ಶಾಸಕರು, 10 ಕೋಟಿ ರು. ಅನುದಾನದಿಂದ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮೇಲಿನ ಪ್ರಕರಣ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಂಡಿದೆ. 2020 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಕೇಸ್ ಭಾರೀ ಸದ್ದು ಮಾಡಿತ್ತು. ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿತ್ತು. ಬಳಿಕ ಇಬ್ಬರೂ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈ ಪ್ರಕರಣ ರಾಗಿಣಿ ವೃತ್ತಿ ಜೀವನಕ್ಕೂ ಸಾಕಷ್ಟು ಹೊಡೆತ ನೀಡಿತ್ತು. ಇದೀಗ ನಟಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಗದ ಹಿನ್ನಲೆಯಲ್ಲಿ ನಿರಪರಾಧಿ ಎಂದು ಹೈಕೋರ್ಟ್ ಹೇಳಿದೆ.
ಪ್ರತಿ ಮಕರ ಸಂಕ್ರಾಂತಿಯ ದಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ರಶ್ಮಿಸ್ಪರ್ಶವಾಗುತ್ತದೆ. ಆದರೆ ಖಗೋಳ ಕೌತುಕಕ್ಕೆ ಸಾಕ್ಷಿಯಾಗುತ್ತಿದ್ದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿಸಿಲ್ಲ. ದೇಗುಲ ಬಲಭಾಗದ ಕಮಾನಿನಿಂದ ಕಿಟಕಿ ಮೂಲಕ ಸೂರ್ಯ ರಶ್ಮಿ ಪ್ರವೇಶ ಮಾಡಬೇಕಿತ್ತು. ಮೋಡ ಕವಿದ ವಾತಾವರಣ ಇದ್ದುದರಿಂದ ಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ ಸ್ಪರ್ಶ ಆಗಲಿಲ್ಲ. ಈ ವರ್ಷ ಸೇರಿ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ.
Advertisement