ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಅಕ್ರಮಗಳ ತನಿಖೆಯನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ಲೋಕಾಯುಕ್ತಕ್ಕೆ ಅನುಮತಿ ನೀಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ತನಿಖೆಯನ್ನು ಮುಂದುವರಿಸಲು ಬುಧವಾರ ಲೋಕಾಯುಕ್ತಕ್ಕೆ ಅನುಮತಿ ನೀಡಿದರು. ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರು ತನಿಖೆಯನ್ನು ನೋಡಿಕೊಳ್ಳಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಇದುವರೆಗಿನ ತನಿಖೆಯ ವಿವರವಾದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತು.
ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಆಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಬಿಗಿ ಕ್ರಮಗಳನ್ನು ಕೈಗೊಳ್ಳದ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ಕ್ರಮಕೈಗೊಳ್ಳದೆ ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿದ್ದಾರೆ.
ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ ಹಣ ಡ್ರಾ ಮಾಡಿದ ಪ್ರಕರಣದಲ್ಲಿ ಪಾಲಿಕೆ ಆಯುಕ್ತರ ಪಿಎ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಿಎ ಮೊಹಮ್ಮದ್ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್ ಮತ್ತು ಮೊಹಮ್ಮದ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದು ಬ್ರಹ್ಮಪುರ ಠಾಣೆ ಪೊಲೀಸರು ಆರೋಪಿಗಳಿಂದ 30 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದಾರೆ. ಚೆಕ್ಬುಕ್ನಲ್ಲಿ ಆಯುಕ್ತರ ನಕಲಿ ಸಹಿ ಮಾಡಿ ಬ್ಯಾಂಕ್ಗೆ 1 ಕೋಟಿ 32 ಲಕ್ಷ ರೂ. ಹಣ ವಿತ್ ಡ್ರಾಗೆ 3 ಚೆಕ್ಗಳನ್ನು ಕಳಿಸಿದ್ದರು. ಒಂದು ಚೆಕ್ ನೀಡಿ 35,56,640 ರೂ. ಹಣವನ್ನು ಆರೋಪಿಗಳು ಡ್ರಾ ಮಾಡಿಕೊಂಡಿದ್ದರು. ಬಳಿಕ ಮತ್ತೆರಡು ಚೆಕ್ಗಳನ್ನು ಖದೀಮರು ಡ್ರಾಗೆ ಕಳುಹಿಸಿದ್ದರು. ಈ ಬಗ್ಗೆ ಅನುಮಾನ ಬಂದು ಆಯುಕ್ತರ ಕಚೇರಿಗೆ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದ ನಂತರ ಪ್ರಕರಣ ಬಯಲಿಗೆ ಬಂದಿದೆ.
ಕನ್ನಡದ ಹಿರಿಯ ನಟ ಸರಿಗಮ ವಿಜಿ ನಿಧನರಾಗಿದ್ದಾರೆ. 76 ವರ್ಷ ವರ್ಷದ ವಿಜಿ ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನ್ಯುಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದರು. ನಾಳೆ ಬೆಳಗ್ಗೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿ ಇರುವ ಚೀತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರಿಗೆ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು 269 ಚಿತ್ರಗಳಿಗೆ ಬಣ್ಣಹಚ್ಚಿದ್ದಾರೆ. ಪೋಷಕ ಪಾತ್ರ, ಹಾಸ್ಯ ಪಾತ್ರ ಹಾಗೂ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಜಾನುವಾರುಗಳ ಮಾಲೀಕರಿಗೆ ಇಂದು ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಕುಟುಂಬಕ್ಕೆ ಮೂರು ಲಕ್ಷ ರೂ.ಗಳ ಪರಿಹಾರವನ್ನು ಜಮೀರ್ ನೀಡಿದ್ದಾರೆ. ಈಮಧ್ಯೆ, ಪ್ರಾಣಿ ಹಿಂಸೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಪ್ರಾಣಿ ಕಲ್ಯಾಣ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು 1533 ಸಹಾಯವಾಣಿಯನ್ನು ಆರಂಭಿಸಿದೆ.
ರಾಜ್ಯ ಸರ್ಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್ ನ ವೆಂಡರ್ಸ್, ಬಾಕಿ ಬಿಲ್ ಬಿಡುಗಡೆ ಮಾಡಲು ಮತ್ತು ಕಿರುಕುಳಕ್ಕೆ ಅಂತ್ಯಹಾಡಲು ಮಧ್ಯಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಿಯೋನಿಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 450 ರಿಂದ 500 ವೆಂಡರ್ಸ್, ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ಆಡಳಿತ ಮಂಡಳಿಯಿಂದ ಅರ್ಹತಾ ಮಾನದಂಡಗಳಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘವು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
Advertisement