ನಾಳೆ ಸಚಿವ ಸಂಪುಟದ ಮುಂದೆ ಜಾತಿ ಗಣತಿ ವರದಿ ಮಂಡನೆ ಇಲ್ಲ, ಒಂದು ವಾರ ಮುಂದೂಡಿಕೆ: ಸಿಎಂ ಸಿದ್ದರಾಮಯ್ಯ

ವರದಿ ಇನ್ನೂ ಬಹಿರಂಗವಾಗದ ಕಾರಣ ಸದ್ಯ ನಡೆಯುತ್ತಿರುವ ಚರ್ಚೆಯು "ಊಹೆ" ಆಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ನವದೆಹಲಿ/ಬೆಂಗಳೂರು: ಜಾತಿ ಗಣತಿ ವರದಿಯನ್ನು ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸುವುದನ್ನು ಒಂದು ವಾರ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ. ರಾಜ್ಯದ 'ಜಾತಿ ಗಣತಿ' ಎಂದು ಕರೆಯಲ್ಪಡುವ ಕರ್ನಾಟಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಜನವರಿ 16 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿತ್ತು.

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸುವ ಯೋಜನೆ ಇತ್ತು. ಆದರೆ, ನಾಳೆ ಅದನ್ನು ಕೈಗೆತ್ತಿಕೊಳ್ಳುವುದಿಲ್ಲ, ಒಂದು ವಾರದ ನಂತರ ನಡೆಯಲಿರುವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವರದಿ ಕುರಿತು ವಿವಿಧ ಸಮುದಾಯಗಳಿಂದ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, "ನನಗೂ ವರದಿಯ ವಿಷಯಗಳು ತಿಳಿದಿಲ್ಲ, ಅದನ್ನು ಇನ್ನೂ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿಲ್ಲ. ಸಂಪುಟ ನಿರ್ಧಾರದ ನಂತರ ವರದಿಯನ್ನು ಬಹಿರಂಗಗೊಳಿಸಲಾಗುವುದು ಎಂದರು.

ಸಾರ್ವಜನಿಕ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ವರದಿ ಇನ್ನೂ ಬಹಿರಂಗವಾಗದ ಕಾರಣ ಸದ್ಯ ನಡೆಯುತ್ತಿರುವ ಚರ್ಚೆಯು "ಊಹೆ" ಆಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ನಾಳೆ ನಡೆಯಲಿರುವ ಸಂಪುಟದ ಮುಂದೆ ಜಾತಿ ಗಣತಿ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಅದರ ಅಂಶಗಳನ್ನು ಬಹಿರಂಗಗೊಳಿಸಬೇಕಾಗಿದೆ ಎಂದು ಹೇಳಿದರು.

ಮುಚ್ಚಿದ ಲಕೋಟೆಯಲ್ಲಿರುವ ವರದಿಯನ್ನು ಸಚಿವ ಸಂಪುಟದ ಮುಂದೆ ತೆರೆಯಲು ನಿರ್ಧರಿಸಲಾಗಿದೆ. ಇಲ್ಲದಿದ್ದರೆ ಅದು ಮಾಹಿತಿಯ ಸೋರಿಕೆಗೆ ಕಾರಣವಾಗಬಹುದು. ಅದರ ಬಗ್ಗೆ ಚರ್ಚೆಯಾಗಲಿ ಅಥವಾ ಇಲ್ಲದಿರಲಿ, ಅದರ ಬಗ್ಗೆ ನಾನು ಈಗ ಮಾತನಾಡಲಾರೆ, ಒಮ್ಮೆ ತೆರೆದ ನಂತರ ಅದರ ಬಗ್ಗೆ ಸ್ವಲ್ಪ ಮಾಹಿತಿಯಾದರೂ ನಮಗೆ ತಿಳಿಯುತ್ತದೆ. ರೂ. 160 ಕೋಟಿ ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿಯನ್ನು ಬಹಿರಂಗಗೊಳಿಸಬೇಕು ಎಂಬ ಒತ್ತಾಯವಿದೆ ಎಂದರು.

ಜಾತಿ ಗಣತಿ ವರದಿ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಸಮೀಕ್ಷೆಯನ್ನು "ಅವೈಜ್ಞಾನಿಕ" ಎಂದು ಕರೆದಿದ್ದು, ಅದನ್ನು ತಿರಸ್ಕರಿಸಿ, ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2015 ರಲ್ಲಿ ಸಮೀಕ್ಷೆಗೆ ಆಯೋಗ ರಚಿಸಿದ್ದರು. ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಸಮಿತಿಯ ನೇತೃತ್ವ ವಹಿಸಿದ್ದರು.ರೂ. 169 ಕೋಟಿ ವೆಚ್ಚದಲ್ಲಿ ಕೈಗೊಂಡ ಸಮೀಕ್ಷೆಯನ್ನು 2016ರಲ್ಲಿ ಪೂರ್ಣಗೊಳಿಸಲಾಗಿತ್ತು ಆದರೆ ತದನಂತರ ಬಂದ ಸರ್ಕಾರ ಅದನ್ನು ಕೈಬಿಟ್ಟಿದ್ದರು.

2020ರಲ್ಲಿ ಬಿಜೆಪಿ ಸರ್ಕಾರ ಜಯಪ್ರಕಾಶ್ ಹೆಗ್ಡೆಅವರನ್ನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಅವರು ಫೆಬ್ರವರಿ 29, 2024ರಲ್ಲಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com