MUDA Case: ED ಯಿಂದ 300 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು; ಸಿಎಂ ವಿರುದ್ಧದ ತನಿಖೆ ಮತ್ತಷ್ಟು ಬಿಗಿ!

ಸಿಎಂ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Siddaramaiah
ಸಿದ್ದರಾಮಯ್ಯ online desk
Updated on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆ ಮತ್ತಷ್ಟು ಬಿಗಿಯಾಗುತ್ತಿದ್ದು, ಇಂದು ಜಾರಿ ನಿರ್ದೇಶನಾಲಯ ಪ್ರಕರಣದ ಸಂಬಂಧ ಒಟ್ಟು 300 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ED ಟ್ವೀಟ್ ಮೂಲಕ ತಿಳಿಸಿದೆ. ಇಡಿ ಮಾಹಿತಿಯ ಪ್ರಕಾರ, ತನಿಖಾ ಸಂಸ್ಥೆ ವಶಕ್ಕೆ ಪಡೆದಿರುವ 142 ಸ್ಥಿರಾಸ್ತಿಯ ಒಟ್ಟು ಮೌಲ್ಯ 300 ಕೋಟಿ ರೂಪಾಯಿಗಳಾಗಿವೆ. ಈ ಬಗ್ಗೆ ಟ್ವೀಟ್ ನಲ್ಲಿ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಿಯಲ್​​ ಎಸ್ಟೇಟ್​ ಉದ್ಯಮಿಗಳ ಹೆಸರಿನಲ್ಲಿ, ಏಜೆಂಟ್​​ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲೂ ಸ್ಥಿರಾಸ್ತಿ ನೋಂದಣಿಯಾಗಿದ್ದವು. ಸ್ನೇಹಮಯಿ ಕೃಷ್ಣ ದೂರಿನನ್ವಯ ತನಿಖೆ ನಡೆಸಿದ್ದ ED ಈಗ ಆಸ್ತಿ ಜಪ್ತಿ ಮಾಡಿದೆ.

ಜಾರಿ ನಿರ್ದೇಶನಾಲಯ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ರೂ. 300 ಕೋಟಿ (ಅಂದಾಜು) ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಇಡಿ ಹೇಳಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಇಡಿಯೂ ತನಿಖೆ ಆರಂಭಿಸಿದೆ. ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳ ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿ.ಎಂ. ಪಾರ್ವತಿ ಅವರಿಗೆ ಅಕ್ರಮ ಪರಿಹಾರ ನಿವೇಶನ ಹಂಚಿಕೆಯಲ್ಲಿ ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಪಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಆಗಿನ ಮುಡಾ ಅಧ್ಯಕ್ಷರು ಮತ್ತು ಮುಡಾ ಆಯುಕ್ತರಿಗೆ ಸ್ಥಿರ ಆಸ್ತಿ, ಮುಡಾ ನಿವೇಶನಗಳು ನಗದು ಇತ್ಯಾದಿಗಳ ರೂಪದಲ್ಲಿ ಅಕ್ರಮವಾಗಿ ನೀಡಿದ ಬಗ್ಗೆ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ರೀತಿ ಪಡೆದ ಅಕ್ರಮ ಹಣವನ್ನು ಮತ್ತಷ್ಟು ಅಕ್ರಮಗಳಿಗೆ ಬಳಕೆ ಮಾಡಲಾಗಿದ್ದು ಅದನ್ನು ಕಾನೂನುಬದ್ಧ ಮೂಲಗಳಿಂದ ಪಡೆಯಲಾಗಿದೆ ಎಂಬಂತೆ ಬಿಂಬಿಸಲಾಗಿರುವ ಹಿನ್ನೆಲೆಯಲ್ಲಿ ಪಿಎಂಎಲ್ಎ ಕಾಯ್ದೆಈ ಪ್ರಕರಣಕ್ಕೆ ಅನ್ವಯವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com