ಇಂದು ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ ಲಾರಿ ಪಲ್ಟಿಯಾಗಿ 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಪ್ರಧಾನಿ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದೆ.
ಇನ್ನು ರಾಯಚೂರಿನ ಸಿಂಧನೂರು ನಗರದ ಹೊರವಲಯದಲ್ಲಿ ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಕ್ರೂಸರ್ ವಾಹನ ಪಲ್ಟಿಯಾಗಿ 3 ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. 14 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಗೆ ತೆರಳುತ್ತಿತ್ತು. ಈ ವೇಳೆ ಆಕ್ಸಿಲರೇಟರ್ ಕಟ್ ಆಗಿದ್ದರಿಂದ ವಾಹನ ಪಲ್ಟಿ ಹೊಡೆದಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಬಂದಿರುವ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ನಿನ್ನೆ ಸಂಜೆ ಕೋರ್ ಕಮಿಟಿ ಸಭೆ ನಡೆಸಿದರು. ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನ ರೆಡ್ಡಿ ಮಾಹಿತಿ ನೀಡಿರೋದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ನಗರದ ಜನತೆಗೆ ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನಗರದಲ್ಲಿ ನಮ್ಮ ಕ್ಲಿನಿಕ್ ಗಳನ್ನು ಆರಂಭ ಮಾಡಿದ್ದರೂ, ಸೌಲಭ್ಯ ಪಡೆಯಲು ಜನರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜನರದಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಒಟ್ಟು 225 ಬಿಬಿಎಂಪಿ ವಾರ್ಡ್ ಗಳಿದ್ದು, ಪ್ರತಿ ವಾರ್ಡ್ ನಲ್ಲಿಯೂ ಒಂದೊಂದು ನಮ್ಮ ಕ್ಲಿನಿಕ್ ಗಳಿವೆ. ನಮ್ಮ ಕ್ಲಿನಿಕ್ ಗಳ ವೈದ್ಯರು ಬಿಬಿಎಂಪಿ ಸಿಬ್ಬಂದಿಗಳೊಂದಿಗೆ ಆಯಾ ವಾರ್ಡ್ ಗಳಲ್ಲಿರುವ ಉದ್ಯಾನವನಗಳು, ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ವರದಿಯಾದ ಮೂರನೇ ಪ್ರಕರಣ ಇದಾಗಿದೆ. ಶಿವಬಸಪ್ಪ ಮಗ್ದುಮ್ ಮತ್ತು ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಲೇದ್ ತಿಳಿಸಿದ್ದಾರೆ. ಸದಾಶಿವ ಶಿವಬಸಪ್ಪ ಮಗ್ದುಮ್, ಲಕ್ಷ್ಮಿ ಬಾಬು ಗೋಲ್ಭಾವಿ, ಸಂಗೀತಾ ವಿಷ್ಣು ಸಾವಂತ್, ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ ಬಂಧಿತರಾಗಿದ್ದಾರೆ. ಮಗ್ದುಮ್ ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ವಿವಾಹವಾಗಿದ್ದರು. ಮಗ್ದುಮ್ ಅವರ ಹಿಂದಿನ ಮದುವೆಯಿಂದ ಮಕ್ಕಳಿದ್ದರು. ಇಬ್ಬರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಮಗ್ದುಮ್ ಹುಡುಗನನ್ನು ಮಾರಾಟ ಮಾಡಲು ಬಯಸಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್‌ಐಎ ಪ್ರಮುಖ ಆರೋಪಿ ಅತೀಕ್ ಅಹ್ಮದ್‌ನನ್ನು ಬಂಧಿಸಿದೆ. ಈತ ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 21ನೇ ಆರೋಪಿಯಾಗಿದ್ದು, ಪಿಎಫ್ಐ ಸದಸ್ಯನೆಂದು ಹೇಳಲಾಗಿದೆ. 2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಪಿಎಫ್ಐ ಸಂಘಟನೆಯ ಸದಸ್ಯರ ಕುಕೃತ್ಯ ಎಂಬುದು ತಿಳಿದುಬಂದಿತ್ತು.
Advertisement