ಸಾಲದ ಶೂಲದಿಂದ ಬಡವರನ್ನು ಕಾಪಾಡಲು ಋಣಮುಕ್ತ ಕಾಯ್ದೆ ಜಾರಿ ಮಾಡಿದ್ದೆ, ಅದನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ: HDK ಆಕ್ರೋಶ

2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನನ್ನ ಸರಕಾರ ಹೋಯಿತು.
HD kumaraswamy
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಜನರ ರಕ್ತ ಹೀರುತ್ತಿರುವ ಮೈಕ್ರೋ ಫೈನಾನ್ಸ್​ಗಳ ಹಾವಳಿಯನ್ನು ನಿರ್ದಯವಾಗಿ ಮಟ್ಟ ಹಾಕಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ನಾಗರಿಕ ಸರಕಾರ ಎನ್ನುವುದು, ಗೃಹ ಸಚಿವರು ಎನ್ನುವವರು ಇದ್ದಾರೆಯೇ? ಎಂದು ಕಿಡಿಕಾರಿದರು.

2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನನ್ನ ಸರಕಾರ ಹೋಯಿತು, ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು. ಅಷ್ಟೇ ಅಲ್ಲ, ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರೋಪಾಯ ಏನು? ಎಂಬ ಬಗ್ಗೆ ನಾನು ಆಗ ಆಲೋಚನೆ ಮಾಡಿದ್ದೆ ಎಂದರು.

ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದೆ. ಆಮೇಲೆ ಅದು ಏನಾಯಿತು? ಎಂದು ಪ್ರಶ್ನಿಸಿದರು.

ನನ್ನ ಸರಕಾರ ಹೋದ ನಂತರ ಬಂದ ಸರ್ಕಾರಗಳು ಈ ಕಾಯ್ದೆಯ ಮಹತ್ವವನ್ನೇ ಅರಿತುಕೊಳ್ಳಲಿಲ್ಲ. ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್​ಗಳ ಉಪಟಳ ಜಾಸ್ತಿ ಆಗಿರುವುದು. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಅಥವಾ ಅನುಮತಿಯನ್ನೇ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡಿ ಹೋಗುವ ದುಸ್ಥಿತಿ ಸೃಷ್ಟಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಜನರು ಹಳ್ಳಿಗಳನ್ನು ಬಿಟ್ಟಿದ್ದರು. ಮನೆಗಳಿಗೆ ಬೀಗ ಹಾಕಿ ಸಾಲಗಾರರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಭೀತಿಗೆ ಸಿಲುಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಹೇಳುತ್ತಾರೆ, ನಾನು ಇಪ್ಪತ್ತು ಸಲವೋ, ಮೂವತ್ತು ಸಲವೋ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ನನ್ನ ಅಧಿಕಾರ ಹೋಗಿಲ್ಲ, ಗಟ್ಟಿಯಾಗಿದ್ದೇನೆ ಎಂದು ಹೇಳುತ್ತಾರೆ. ಅವರೇನೋ ಗಟ್ಟಿಯಾಗಿದ್ದಾರೆ. ಆದರೆ, ನಿಮ್ಮನ್ನು ಮುಖ್ಯಮಂತ್ರಿ ಜಾಗದಲ್ಲಿ ಕೂರಿಸಿರುವ ಆ ಜನ ಏನಾಗಿದ್ದಾರೆ? ಅವರನ್ನು ಗಟ್ಟಿ ಮಾಡಲಿಕ್ಕೆ ಏನು ಮಾಡಿದ್ದೀರಿ? ಅದು ನನ್ನ ಪ್ರಶ್ನೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

HD kumaraswamy
ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳ: ಜನವರಿ 25ರಂದು ಅಧಿಕಾರಿಗಳ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಾಡಹಗಲೇ ಬ್ಯಾಂಕ್​ಗಳಿಗೆ ನುಗ್ಗಿ ಲೂಟಿ ಮಾಡಲಾಗುತ್ತಿದೆ. ಎಟಿಎಂಗಳಿಗೆ ಹಣ ತುಂಬುವ ಸಿಬ್ಬಂದಿಯನ್ನು ಗುಂಡಿಟ್ಟು ಕೊಂದು ಹಗಲಲ್ಲೇ ಹಣ ದೋಚಿ, ನೆರೆ ರಾಜ್ಯಕ್ಕೆ ಪರಾರಿಯಾಗುವುದು.. ಹೀಗೆ ಅಪರಾಧ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನನಗೇನು ಸಂಬಂಧ ಇಲ್ಲವೆಂದು ಗೃಹ ಸಚಿವರು ಹೇಳಿದರೆ ಅರ್ಥವೇನು? ಎಂದು ಕಿಡಿಕಾರಿದರು.

ಕಾನೂನುಬಾಹಿರವಾಗಿ ಮೈಕ್ರೋ ಫೈನಾನ್ಸ್ ಮಾಡಲಿಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ ಕೊಟ್ಟವರು ಯಾರು? ಸರಕಾರ ಅನುಮತಿ ಕೊಟ್ಟಿದೆಯಾ? ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯ ನೀಡಿದರೆ ಮೈಕ್ರೋ ಫೈನಾನ್ಸ್​ಗಳ ಬಳಿಗೆ ಸಾಲಕ್ಕೆ ಏತಕ್ಕೆ ಹೋಗುತ್ತಾರೆ?ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com