ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಗಳು ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಸದ್ದು ಮಾಡುತ್ತಿವೆ. ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದು ಮತ್ತು ನಿಜವಾದ ಸಾಲಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಕ್ರೋ-ಫೈನಾನ್ಸ್ ಕಂಪನಿಗಳು ಸಾಲಗಾರರಿಂದ ಹಣ ವಸೂಲಿ ಮಾಡಲು ಕಿರುಕುಳ ನೀಡುತ್ತಿವೆ ಎಂದು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿರಿಯ ಅಧಿಕಾರಿಗಳು, ಸಚಿವರು ಹಾಗೂ ಮೈಕ್ರೋಫೈನಾನ್ಸ್ ಕಂಪನಿಗಳ ಸಂಘದ ಪ್ರತಿನಿಧಿಗಳು, ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಸಾಲ ವಸೂಲಾತಿ ವೇಳೆ ಆರ್ಬಿಐ ನಿಯಮದಂತೆ ನಡೆದುಕೊಳ್ಳಬೇಕು. ಮೈಕ್ರೋ ಫೈನಾನ್ಸ್, ಗಿರವಿ ಅಂಗಡಿಯವರು ಈ ಕಾನೂನು ಪಾಲಿಸಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಾತಿಗೆ ಮುಂದಾದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
2025ರ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಶುಕ್ರವಾರ 76ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ KSRP DIGP ಬಸವರಾಜ್ ಶರಣಪ್ಪ ಜಿಳ್ಳೆ, ಮತ್ತು ಕೆಎಸ್ ಆರ್ ಪಿ ತುಮಕೂರಿನ ಕಮಾಂಡೆಂಟ್ ಹಂಝಾ ಹುಸೇನ್ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ. ಬೆಂಗಳೂರಿನ DCRI DIGP ರೇಣುಕಾ ಕೆ ಸುಕುಮಾರ, ಪೊಲೀಸ್ ಪ್ರಧಾನ ಕಚೇರಿಯ ಎಐಜಿಪಿ ಸಂಜೀವ ಎಂ. ಪಾಟೀಲ್ ಅವರ ಗಮನಾರ್ಹ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಮುಡಾ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿತ್ತು. ಆದರೆ ಜನವರಿ 27 ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಗೆ ಮುನ್ನ ಇಂದು ವರದಿಯನ್ನು ಸಲ್ಲಿಸಲಾಗಿದೆ. ಮೈಸೂರು ಲೋಕಾಯುಕ್ತ ಅಧಿಕಾರಿಗಳು ವರದಿಯ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇನ್ನು ತಮ್ಮ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಎತ್ತಿಹಿಡಿದಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಮಾ.22 ಕ್ಕೆ ಮುಂದೂಡಲಾಗಿದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳನ್ನು ಪೂರೈಸಲು ಕೇಂದ್ರ ಬಜೆಟ್ನಲ್ಲಿ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್ಗೆ 15 ಸಾವಿರ ಕೋಟಿ ರೂ. ಪೂರ್ವದಿಂದ ಪಶ್ಚಿಮ ಕಾರಿಡಾರ್ಗೆ 25 ಸಾವಿರ ಕೋಟಿ ರೂ. ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯ ಇದೆ. ಬೆಂಗಳೂರಿನ ಪ್ರಮುಖ 17 ಫ್ಲೈ ಓವರ್ಗೆ 12 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಡಿಸಿಎಂ ಉಲ್ಲೇಖಿಸಿದ್ದಾರೆ.
ಕನಕಪುರ ತಾಲೂಕಿನ ಅಚ್ಚಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಂಗಾಣಿ ದೊಡ್ಡಿ ಗ್ರಾಮದ ಇಡೀ ಸ್ವತ್ತನ್ನೇ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡ ಆರೋಪದ ಮೇರೆಗೆ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಆರು ಮಂದಿಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಈಗ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕನಕಪುರ ತಹಶೀಲ್ದಾರ್ ಮಂಜುನಾಥ್, ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್, ಶಿರಸ್ತೆದಾರ್ ಜಗದೀಶ್, ಕಂದಾಯ ನಿರೀಕ್ಷಕ ರಜತ್, ಗ್ರಾಮಲೆಕ್ಕಿಗ ರಮೇಶ್ ಹಾಗೂ ಈ ಹಿಂದೆ ಕನಕಪುರ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ ಸ್ಮಿತಾ ರಾಮು ಎಂಬುವರ ವಿರುದ್ಧವೂ ಆರೋಪ ಕೇಳಿಬಂದಿದೆ..
Advertisement