
ನವದೆಹಲಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪದ್ಮ ಪ್ರಶಸ್ತಿಗಳ ವಿಜೇತ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕನ್ನಡಿಗರು ಸೇರಿದ್ದಾರೆ.
ವೆಂಕಪ್ಪ ಅಂಬಾಜೀ ಸುಗಟ್ಕೇರ್, ಡಾ. ವಿಜಯಲಕ್ಷ್ಮಿ ದೇಶಮಾನೆ, ಹಾಗೂ ಭೀಮವ್ವ ದೊಡ್ಡ ಬಾಲಪ್ಪಗೆ ಪದ್ಮ ಪ್ರಶಸ್ತಿ ಲಭಿಸಿದೆ.
ವೆಂಕಪ್ಪ ಅಂಬಾಜೀ ಸುಗಟ್ಕೇರ್
ಕರ್ನಾಟಕದ ಜಾನಪದ ಗಾಯಕರಾಗಿ ಜನಪ್ರಿಯತೆ ಪಡೆದ 81 ವರ್ಷದ ವೆಂಕಪ್ಪ ಅಂಬಾಜೀ ಸುಗಟ್ಕೇರ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. 2024 ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ 110ನೇ ಮನ್ ಕಿ ಬಾತ್‌ನಲ್ಲಿ ವೆಂಕಪ್ಪ ಅಂಬಾಜೀ ಸುಗಟ್ಕೇರ್ ಹೆಸರನ್ನು ಉಲ್ಲೇಖಿಸಿದ್ದರು.
ಭೀಮವ್ವ ದೊಡ್ಡಬಾಳಪ್ಪ
ಕೊಪ್ಪಳ ಮೂಲದ ತೊಗಲುಗೊಂಬೆಯಾಟದ ಹಿರಿಯ ಕಲಾವಿದ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಡಾ.ವಿಜಯಲಕ್ಷ್ಮೀ ದೇಶಮಾನೆ
ಕಲಬುರಗಿ ಮೂಲದ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ ಎಂದೇ ಹೆಸರುವಾಸಿಯಾಗಿರುವ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
1980ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ ಪಡೆದರು. 1985ರಲ್ಲಿ ಬಳ್ಳಾರಿಯ ವೈದ್ಯಕೀಯಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಕೊಂಡಿದ್ದರು. 1989ರಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ ಅವರು 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್‍ಎಐಎಸ್ ಫೆಲೋಶಿಪ್‍ಗೆ ಪಾತ್ರರಾದರು. ಕಿದ್ವಾಯಿ ಸ್ಮಾರಕಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯೂ ಆದರು. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ ಆರಂಭಿಸಿದ್ದರು. ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತಾರಾಷ್ಟ್ರೀಯ ವಲಯ ರಾಷ್ಟ್ರೀಯರತ್ನ, ಕೆಂಪೇಗೌಡ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
Advertisement