News headlines 26-1-2025 | ಸಿಎಂ ಗೆ ಕೋರ್ಟ್ ನೊಟೀಸ್; ಗ್ಯಾರೆಂಟಿ ಯೋಜನೆಗಳಿಗೆ ರಾಜ್ಯಪಾಲರ ಮೆಚ್ಚುಗೆ; ಖ್ಯಾತ ಹೃದ್ರೋಗ ತಜ್ಞ ಡಾ. ಕೆ.ಎಂ ಚೆರಿಯನ್ ನಿಧನ; ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ

News headlines
ಸುದ್ದಿ ಮುಖ್ಯಾಂಶಗಳುonline desk

1. ಗ್ಯಾರೆಂಟಿ ಯೋಜನೆಗಳಿಗೆ ರಾಜ್ಯಪಾಲರ ಮೆಚ್ಚುಗೆ

ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಧ್ವಜಾರೋಹಣ ನೆರವೇರಿಸಿದರು.

ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನರ ಸಂಕಷ್ಟಗಳನ್ನು ಅರಿತು ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿದ್ದು, ದೇಶದ ಗಮನ ಸೆಳೆದಿವೆ 5 ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬ ಭವಿಷ್ಯವೂ ಸುಳ್ಳಾಗಿದೆ. ಕರ್ನಾಟಕ ರಾಜ್ಯವು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನು ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

2. ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ

76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2025ನೇ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದ್ದು, ರಾಜ್ಯದ 9 ಸಾಧಕರು ಈ ಬಾರಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪದ್ಮ ವಿಭೂಷಣ ಪ್ರಶಸ್ತಿಯನ್ನು ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಲಭಿಸಿದ್ದರೆ, ನಟ ಅನಂತನಾಗ್, ಶಿಕ್ಷಣ ತಜ್ಞ ಎ. ಸೂರ್ಯಪ್ರಕಾಶ್ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ, ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ದೇಶಮಾನೆ, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಹಾಸನ ರಘು ಮತ್ತು ಪ್ರಶಾಂತ್ ಪ್ರಕಾಶ್ ಅವರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಈ ಬಾರಿ ರಾಷ್ಟ್ರಪತಿಗಳು 139 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದ್ದಾರೆ.

3. ಸಿಎಂ ಗೆ ಕೋರ್ಟ್ ನೊಟೀಸ್

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಸಲ್ಲಿಸಿದ್ದ ಖಾಸಗಿ ದೂರಿನ ಅನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಟಿಜೆ ಅಬ್ರಹಾಂ ಅವರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದ ಅರ್ಜಿದಾರರಲ್ಲಿ ಟಿ.ಜೆ.ಅಬ್ರಹಾಂ ಕೂಡ ಒಬ್ಬರಾಗಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.

4. ಖ್ಯಾತ ಹೃದ್ರೋಗ ತಜ್ಞ ಡಾ. ಕೆ.ಎಂ ಚೆರಿಯನ್ ನಿಧನ

ಖ್ಯಾತ ಹೃದ್ರೋಗ ತಜ್ಞ, ದೇಶದ ಮೊದಲ ಯಶಸ್ವಿ ಪರಿಧಮನಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾದ ವೈದ್ಯ ಡಾ. ಕೆ. ಎಂ. ಚೆರಿಯನ್ ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚೆರಿಯನ್ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ರಾತ್ರಿ 11.55 ಕ್ಕೆ ನಿಧನರಾಗಿದ್ದಾರೆ. ಡಾ. ಚೆರಿಯನ್ ಫ್ರಾಂಟಿಯರ್ ಲೈಫ್‌ಲೈನ್ ಮತ್ತು ಡಾ. ಚೆರಿಯನ್ ಹಾರ್ಟ್ ಫೌಂಡೇಶನ್ ಸ್ಥಾಪಕರೂ ಆಗಿರುವ ಚೆರಿಯನ್ 1991 ರಲ್ಲಿ ಪದ್ಮಶ್ರೀ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1975 ರಲ್ಲಿ ಚೆನ್ನೈನ ಪೆರಂಬೂರಿನ ದಕ್ಷಿಣ ರೈಲ್ವೆ ಪ್ರಧಾನ ಕಚೇರಿ ಆಸ್ಪತ್ರೆಯಲ್ಲಿ ಭಾರತದ ಮೊದಲ ಯಶಸ್ವಿ ಪರಿಧಮನಿ ಅಪಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದರು.

5. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಲು ಪ್ರಧಾನಿಗೆ ಸಿಎಂ ಪತ್ರ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಸಿಎಂ, 2023-24ನೇ ಸಾಲಿನ ಕೇಂದ್ರದ ಬಜೆಟ್‌ನಲ್ಲಿ 5,300 ಕೋಟಿ ರು. ಅನುದಾನದ ಜತೆಗೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮೂರು ವರ್ಷವಾದರೂ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಈ ವರ್ಷವಾದರೂ ಬಿಡುಗಡೆ ಮಾಡುವಂತೆ ಹಣಕಾಸು ಮತ್ತು ಜಲಶಕ್ತಿ ಸಚಿವಾಲಯಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸಲಿದೆ. ಜೊತೆಗೆ 367 ಕೆರೆಗಳಿಗೆ ನೀರು ತುಂಬಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com