
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗಾಗಿ ಈ ಸಲ ಕೇಂದ್ರದ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಕ್ರಮವಹಿಸುವಂತೆ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಪತ್ರ ಬರೆದಿರುವ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಶೈಕ್ಷಣಿಕ, ಆರೋಗ್ಯ, ಮೂಲಭೂತ ಸೌಲಭ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಈ ಎಲ್ಲ ಕ್ಷೇತ್ರಗಳ ಅಭಿವೃದ್ದಿ ಪಡಿಸಲು ಆರ್ಥಿಕ ಸವಾಲು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಯುಪಿಎ ಸರಕಾರ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತಂದು ಆರ್ಟಿಕಲ್ 371 (ಜೆ) ಜಾರಿಗೊಳಿಸಿ ಈ ಭಾಗದ ಸಮಗ್ರ ಅಭಿವೃದ್ದಿಗೆ ಶ್ರಮವಹಿಸಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ವಾರ್ಷಿಕವಾಗಿ 5 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಿದೆ, 2024-25 ರ ಆರ್ಥಿಕ ವರ್ಷಕ್ಕೆ ಕೂಡ ಇದು ಅನ್ವಯವಾಗುತ್ತದೆ. ಇದರ ಜೊತೆಗೆ ಅಭಿವೃದ್ಧಿಗೆ ಹಲವಾರು ಯೋಜನೆ ಹಾಕಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರಕಾರ ತನ್ನದೇ ಮಾದರಿಯಲ್ಲಿ ಕೇಂದ್ರ ಸರಕಾರದಿಂದ 5 ಸಾವಿರ ಕೋಟಿ ರೂ. ವಿಶೇಷ ಅನುದಾನಕ್ಕೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ. ಪ್ರದೇಶದ ಅಭಿವೃದ್ಧಿಯ ಅಗತ್ಯಗಳನ್ನು ಪರಿಹರಿಸಲು, ಪ್ರಮುಖ ಯೋಜನೆಗಳ ಕಾರ್ಯಗತಗೊಳಲು ಮತ್ತು ಈ ಭಾಗದ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಈ ನಿರ್ಣಾಯಕ ನಿಧಿಯು ಅತ್ಯಗತ್ಯವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ, ಮುಂಬರುವ ಕೇಂದ್ರ ಬಜೆಟ್‍ನಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ವಿಶೇಷ ಅನುದಾನವನ್ನು ಒದಗಿಸುವಂತೆ ಒತ್ತಾಯಿಸಿ, ಈ ಅನುದಾನ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಗತಿಯನ್ನು ಗಮನಾರ್ಹವಾಗಿ ವೇಗಗೊಳಿಸುವುದರ ಜೊತೆಗೆ ಹಲವಾರು ನಿರ್ಣಾಯಕ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Advertisement