
ಬೆಂಗಳೂರು: ಕಳೆದ 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಕ್ಕೂರಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಗ ಪಡೆಯುತ್ತಿದ್ದು, ಯುಗಾದಿಯ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯನ್ನು ಆರಂಭದಲ್ಲಿ ನೈಋತ್ಯ ರೈಲ್ವೆ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರರು ಎಂಟು ಕಂಬಗಳು ಮತ್ತು ಗಿರ್ಡರ್ ಬೀಮ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಬಿಬಿಎಂಪಿ ಪ್ರಮುಖ ರಸ್ತೆ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಆದರೆ ಭೂಸ್ವಾಧೀನ ಸಮಸ್ಯೆಗಳಿಂದಾಗಿ, ಮೇಲ್ಮುಖ ಮತ್ತು ಕೆಳಮುಖ ರ‍್ಯಾಂಪ್ ಕಾಮಗಾರಿ ಅಪೂರ್ಣವಾಗಿತ್ತು.
ವೆಚ್ಚ ಅಧಿಕವಾಗಿದೆ ಎಂದು ಆರೋಪಿಸಿ ಗುತ್ತಿಗೆದಾರರು ಯೋಜನೆಯನ್ನು ಮಧ್ಯದಲ್ಲಿಯೇ ಕೈಬಿಟ್ಟಿದ್ದರು. ನಂತರ ಯೋಜನೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ, ಮತ್ತೊಬ್ಬ ಗುತ್ತಿಗೆದಾರರಿಗೆ ವಹಿಸಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಈಗ ಕಾಮಗಾರಿ ವೇಗ ಪಡೆಯುತ್ತಿದೆ. ರ‍್ಯಾಂಪ್‌ಗಾಗಿ ಪೂರ್ವಭಾವಿಯಾಗಿ ನಿರ್ಮಿಸಲಾದ ಕೆಲಸ ನಡೆಯುತ್ತಿದೆ. ಇದು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಯುಗಾದಿಯ ವೇಳೆಗೆ ಉದ್ಘಾಟನೆಗೊಳ್ಳುವ ಭರವಸೆ ಇದೆ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೇತುವೆ ಪೂರ್ಣಗೊಂಡ ನಂತರ, ಶಿವಾಜಿನಗರದಿಂದ ಯಲಹಂಕಕ್ಕೆ ತಲುಪಲು ಬಸ್‌ಗಳಿಗೆ ಮತ್ತೊಂದು ಮಾರ್ಗವಾಗಲಿದೆ. ಹೆಣ್ಣೂರು ಮತ್ತು ಹೊರಮಾವುಗಳಿಂದ ಬರುವ ವಾಹನಗಳು ನಾಗವಾರ, ಮರಿಯಣ್ಣನಪಾಳ್ಯ, ಅಮೃತಹಳ್ಳಿ ಮತ್ತು ಜಕ್ಕೂರು ಪ್ರವೇಶಿಸಿ ಮತ್ತೆ ಯಲಹಂಕ ತಲುಪಬಹುದು. ಜಕ್ಕೂರು ಅಮೃತಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಹಿಂದಿನಿಂದಲೂ ಫ್ಲೈಓವರ್ ಬೇಡಿಕೆ ಇತ್ತು.
ಕಾಮಗಾರಿ ಪೂರ್ಣಗೊಳ್ಳುವಲ್ಲಿನ ವಿಳಂಬವು ಬಹಳಷ್ಟು ಅನಾನುಕೂಲತೆಯನ್ನು ಉಂಟುಮಾಡುತ್ತಿದೆ ಎಂದು ಅವರು ಹೇಳಿದರು. ಶಾಲಾ ಬಸ್‌ಗಳು ಪರ್ಯಾಯ ಮಾರ್ಗಗಳನ್ನು ಸಂಚಾರಕ್ಕೆ ಬಳಸಬೇಕಾಗಿದ್ದು, ಅವು ಹೆಚ್ಚು ಸುರಕ್ಷಿತವಾಗಿಲ್ಲ. ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ರೈಲ್ವೆ ಗೇಟ್‌ನಲ್ಲಿ ಯಾವಾಗಲೂ ಟ್ರಾಫಿಕ್ ಜಾಮ್ ಇರುತ್ತದೆ. ಮಳೆಗಾಲದಲ್ಲಿ ರಚಿಸಲಾದ ಮ್ಯಾಜಿಕ್ ಬಾಕ್ಸ್ ಸಹ ಹೆಚ್ಚು ಸುರಕ್ಷಿತವಾಗಿಲ್ಲ. ಜಕ್ಕೂರು-ಸಂಪಿಗೆಹಳ್ಳಿ ಒಳ ರಸ್ತೆಯಾಗಿದ್ದು, ಇದನ್ನು ಅತಿಯಾಗಿ ಬಳಸಲಾಗುತ್ತಿದೆ ಮತ್ತು ಅಪಘಾತಗಳಿಗೆ ಗುರಿಯಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಜಕ್ಕೂರು ಮತ್ತು ಸಂಪಿಗೆಹಳ್ಳಿ ನಿವಾಸಿಗಳಿಗೆ ಸಹಾಯವಾಗಲಿದೆ ಎಂದು ಇಲ್ಲಿನ ನಿವಾಸಿ ಅನ್ನಪೂರ್ಣ ಕಾಮತ್ ಹೇಳುತ್ತಾರೆ.
Advertisement