
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಳೆದ ಎರಡು ವಾರಗಳಿಂದ ಮಹಾಕುಂಭ ಮೇಳ ನಡೆಯುತ್ತಿದ್ದು, ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬುಧವಾರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, 15ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇಂದು ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದಿಂದ ಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಯ ತಾಯಿ, ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ(50) ಮತ್ತು ಅವರ ಮಗಳು ಮೇಘಾ(18) ಹತ್ತರವಾಠ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ಸಂಬಂಧಿ ಗುರುರಾಜ ಹುದ್ದಾರ ಅವರು ಮಾಹಿತಿ ನೀಡಿದ್ದಾರೆ.
ಇದೀಗ ಬಂದ ಮಾಹಿತಿಯ ಪ್ರಕಾರ, ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೋರ್ವ ವ್ಯಕ್ತಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಶೆಟ್ಟಿಗಲ್ಲಿಯ ಅರುಣ್ ಕೋಪರ್ಡೆ ಹಾಗೂ ಮಹಾದೇವಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಪಾಲ್ಕೊಳ್ಳಲೆಂದು ಕರ್ನಾಟದ ಬೆಳಗಾವಿಯಿಂದ ಸುಮಾರು 60 ಜನರ ತಂಡ ಎರಡು ಬಸ್‌ಗಳಲ್ಲಿ ತೆರಳಿದ್ದರು. ಇದರಲ್ಲಿ ನಮ್ಮ ಜೊತೆಗೆ 9 ಜನರು ಇದ್ದರು. ಅದರಲ್ಲಿ ನಾಲ್ಕೈದು ಜನ ಕಾಣಿಸುತ್ತಿಲ್ಲ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದರು. ಈ ಮಧ್ಯೆ ಬೆಳಗಾವಿಯ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿಗಳೂ ವೈರಲ್ ಆಗಿತ್ತು. ಆದ್ರೆ ಇದೀಗ ನಾಪತ್ತೆಯಾಗಿದ್ದ ತಾಯಿ ಜ್ಯೋತಿ ಮತ್ತು ಮಗಳು ಮೇಘ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Advertisement