ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನ ಕುಂಭಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಅಮೃತ ಸ್ನಾನಕ್ಕೆ ತೆರಳಿದ ಪರಿಣಾಮ ಕಾಲ್ತುಳಿತ ಸಂಭವಿಸಿದ್ದು, 30 ಮಂದಿ ಮೃತಪಟ್ಟು, ಸುಮಾರು 60 ಜನರು ಗಾಯಗೊಂಡಿದ್ದಾರೆ.
ಕರ್ನಾಟಕದಿಂದ ಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ವಡಗಾವಿ ನಿವಾಸಿ ಜ್ಯೋತಿ ಹತ್ತರವಠ, ಮೇಘಾ ಹತ್ತರವಾಠ, ಶಿವಾಜಿ ನಗರದ ಮಹಾದೇವಿ ಭಾವನೂರ ಮತ್ತು ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಕಾಲ್ತುಳಿತದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಸ್ಥಳದಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಪರಿಸ್ಥಿತಿಯ ವರದಿಗಳನ್ನು ನಿರಂತರವಾಗಿ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದರು. ಕಾಲ್ತುಳಿತ ದುರಂತದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯುವವರ ಹಿತಾಸಕ್ತಿಗಳನ್ನು ರಕ್ಷಿಸಲು ಕರಡು ಸುಗ್ರೀವಾಜ್ಞೆ ತರಲು ಇಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ. ಕರಡನ್ನು ಅಂತಿಮಗೊಳಿಸಿದ ನಂತರ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ನಂತರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಈಮಧ್ಯೆ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಪ್ರೇಮಾ ಮತ್ತು ಹೇಮಂತ್ ಮೃತಪಟ್ಟಿದ್ದು, ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ ಎಂಬುವರು ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. ಮೂರು ತಿಂಗಳ ಕಂತು ಕಟ್ಟದ ಹಿನ್ನೆಲೆ ವಾರದ ಹಿಂದೆಯಷ್ಟೇ ಪ್ರೇಮಾ ಮನೆ ಸೀಜ್ ಮಾಡಲಾಗಿತ್ತು. ಇದರಿಂದ ಮನನೊಂದು ಪ್ರೇಮಾ ಅವರು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ ಹಿನ್ನಲ್ಲೆ ರೈತ 52 ವರ್ಷದ ಹೇಮಂತ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಯಾಗ್ರಾಜ್ ಮಹಾಕುಂಭಮೇಳ ಯಾತ್ರೆ ಮುಗಿಸಿ ವಾಪಸ್ ಬರುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ರಾಜ್ಯದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಬಳಿ ನಡೆದಿದೆ. ಮೈಸೂರು ತಾಲೂಕಿನ ಮಂಟೆಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಶರ್ಮಾ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟ ತಾಲೂಕಿನ ಕೆಆರ್ಎಸ್ ನಿವಾಸಿ ಅರುಣ್ ಶಾಸ್ತ್ರಿ ಎರಡು ಕಾರುಗಳಲ್ಲಿ ಪ್ರಯಾಗ್ರಾಜ್ ಯಾತ್ರೆಗೆ ಹೋಗಿದ್ದರು. ಪ್ರಯಾಗ್ರಾಜ್ ಯಾತ್ರೆ ಮುಗಿಸಿ ಕಾಶಿಗೆ ಬರುತ್ತಿದ್ದಾಗ ಮಿರ್ಜಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 100ಕ್ಕೂ ಹೆಚ್ಚ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಮೈದಾನದಲ್ಲಿ ನಡೆದಿದೆ. ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಈ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದರು. 5 ಕಾರು, 5 ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿದ್ದು, ಮತ್ತಷ್ಟು ವಾಹನಗಳಿಗೆ ಭಾಗಶಃ ಹಾನಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲಾಗಿದೆ. ಸಿಗರೇಟ್ ಹಚ್ಚಿ ಬೆಂಕಿ ಕಡ್ಡಿಯನ್ನು ಒಣಗಿದ ಹುಲ್ಲಿನ ಮೇಲೆ ಎಸೆದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.
Advertisement