
ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ 15 ಜನರ ವಿರುದ್ಧ ದಾಖಲಾಗಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದ ತನಿಖೆ ಮತ್ತು ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಬೋವಿ ಸಮುದಾಯ(ಪರಿಶಿಷ್ಟ ಜಾತಿ)ಕ್ಕೆ ಸೇರಿದ ಐಐಎಸ್ ಸಿ ಮಾಜಿ ಅಧ್ಯಾಪಕ ದುರ್ಗಪ್ಪ ಅವರು ನೀಡಿದ ದೂರಿನ ಆಧಾರದ ಮೇಲೆ ಮತ್ತು 71ನೇ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ (ಸಿಸಿಎಚ್) ನಿರ್ದೇಶನದ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಇದನ್ನು ಪ್ರಶ್ನಿಸಿ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರು ಬುಧವಾರ ತಡೆಯಾಜ್ಞೆ ನೀಡಿದ್ದಾರೆ.
"ಈ ಮಧ್ಯೆ, ಸದಾಶಿವನಗರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 17/2025 ರಲ್ಲಿನ ಎಲ್ಲಾ ಮುಂದಿನ ವಿಚಾರಣೆಗಳು/ತನಿಖೆ ಮತ್ತು ಎಲ್‌ಎಕ್ಸ್‌ಎಕ್ಸ್ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಬೆಂಗಳೂರಿನ ವಿಶೇಷ ನ್ಯಾಯಾಧೀಶರ ಫೈಲ್‌ನಲ್ಲಿ ಪಿಸಿಆರ್ ಸಂಖ್ಯೆ 1/2025 ರಲ್ಲಿ ಅರ್ಜಿದಾರರಿಗೆ ಸಂಬಂಧಿಸಿದ ಎಲ್ಲಾ ಮುಂದಿನ ವಿಚಾರಣೆ/ತನಿಖೆಯನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಹಿಡಿಯಲಾಗಿದೆ" ಎಂದು ಹೈಕೋರ್ಟ್ ಹೇಳಿದೆ.
2014ರಲ್ಲಿ ತನ್ನನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಲಾಗಿದೆ ಎಂದು ದುರ್ಗಪ್ಪ ಅವರು ಆರೋಪಿಸಿದ್ದರು.
ದುರ್ಗಪ್ಪ ಅವರ ದೂರಿನ ಆಧಾರದ ಮೇಲೆ ಗೋಪಾಲಕೃಷ್ಣನ್ ಮತ್ತು ಐಐಎಸ್ ಸಿ ಮಾಜಿ ನಿರ್ದೇಶಕ ಬಲರಾಮ್ ಸೇರಿದಂತೆ 17 ಜನರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Advertisement