ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸದಾಗಿ ಜಾರಿಗೆ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್, ಮೈಕ್ರೋಫೈನಾನ್ಸ್ ನಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಕೂಡ ವರದಿಯಾಗಿದೆ. ಸುಗ್ರೀವಾಜ್ಞೆ ತರಲು ಸಿಎಂಗೆ ಸಚಿವ ಸಂಪುಟ ಅಧಿಕಾರವನ್ನು ನೀಡಿದೆ, ಸಿಎಂ ಜೊತೆ ಚರ್ಚಿಸಿದ ಬಳಿಕ ಮಸೂದೆಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು, ಸಂತ್ರಸ್ತರ ಮೃತದೇಹಗಳು ಇಂದು ರಾಜ್ಯಕ್ಕೆ ತಲುಪಿವೆ. ಪ್ರಯಾಗ್ ರಾಜ್ ನಲ್ಲಿರುವ ಕನ್ನಡಿಗರ ಬಗ್ಗೆ ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ, ಸದ್ಯಕ್ಕೆ, ಯಾವುದೇ ಇತರ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿಲ್ಲ. ಆದಾಗ್ಯೂ, ಯಾವುದೇ ಗಾಯಾಳುಗಳು ಇದ್ದರೆ ಪತ್ತೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದ ನೋಡಲ್ ಅಧಿಕಾರಿ ಹರ್ಷಲ್ ಬೋಯಾರ್ ಅವರಿಗೆ ಸೂಚಿಸಲಾಗಿದೆ'. ಮಹಾಕುಂಭ ಮೇಳಕ್ಕೆ ತೆರಳಿದ್ದು, ಸಂಪರ್ಕಕ್ಕೆ ಸಿಗದ ಯಾತ್ರಿಕರ ರಕ್ಷಣೆಗಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 080- 22340676ಗೆ ಸಂಪರ್ಕಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅಂಗೀಕರಿಸಿದ ಬೆಂಗಳೂರು ಅರಮನೆ (ಭೂಮಿ ಬಳಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ, 2025 ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದು, ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಈ ಗೆಜೆಟ್ ನೊಂದಿಗೆ ಹಿಂದಿನ ಮೈಸೂರು ರಾಜಮನೆತನಕ್ಕೆ ಸೇರಿದ ಜಾಗ ಈಗ ರಾಜ್ಯ ಸರ್ಕಾರಕ್ಕೆ ಸೇರಿದೆ. ಜಯಮಹಲ್ ಮತ್ತು ಬಳ್ಳಾರಿ ರಸ್ತೆಯ 2 ಕಿ.ಮೀ. ಉದ್ದದ ಅಗಲೀಕರಣಕ್ಕಾಗಿ 15 ಎಕರೆ 17.5 ಗುಂಟೆ ಭೂಮಿಯನ್ನು ಬಳಸಿಕೊಳ್ಳಲು ಸರ್ಕಾರ ರಾಜಮನೆತನಕ್ಕೆ ಪರಿಹಾರವಾಗಿ 3,014 ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಡಿಸೆಂಬರ್ 10, 2024 ರಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಈ ಸುಗ್ರೀವಾಜ್ಞೆಯನ್ನು ಪ್ರಕಟಿಸಲು ನಿರ್ಧರಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾದರೆ, ಅದು ರಾಜ್ಯದ ಖಜಾನೆಗೆ ಹೊರೆಯಾಗುತ್ತದೆ ಎಂದು ಸರ್ಕಾರ ವಾದಿಸಿತು.
ನಮ್ಮ ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಶೇ.45 ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಬಿಜೆಪಿ ನಾಯಕ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಹೇಳಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ಪ್ರಸ್ತಾವಿತ ದರ ಏರಿಕೆ ಫೆಬ್ರವರಿ 1 ರಿಂದ ಜಾರಿಗೆ ಬರಬೇಕಿತ್ತು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೋದಿ ಸರ್ಕಾರ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದೆ ಎಂದು ಸಂಸದರು ತಿಳಿಸಿದ್ದಾರೆ. ಏತನ್ಮಧ್ಯೆ, ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನಲಾದ ನಿರ್ಧಾರದ ಅಧಿಕೃತ ಪ್ರತಿಯನ್ನು ಇನ್ನೂ ಪಡೆಯಬೇಕಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.
ಬೆಂಗಳೂರಿನ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ DGGI 3,200 ಕೋಟಿ ರೂ.ಗಳ ಬೃಹತ್ GST ವಂಚನೆಯನ್ನು ಬಯಲು ಮಾಡಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದೆ. ಡಿಜಿಜಿಐನ ಬೆಂಗಳೂರು ವಲಯ ಘಟಕ ಬೆಂಗಳೂರು ಮತ್ತು ಮುಂಬೈನಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿ ಸಂಕೀರ್ಣ ಹಗರಣವನ್ನು ಬಯಲು ಮಾಡಿದೆ. ಪ್ರಕರಣ ಸಂಬಂಧ ಮತ್ತೋರ್ವ ಶಂಕಿತ ತಲೆ ಮರೆಸಿಕೊಂಡಿದ್ದಾನೆ. ಎಂದು ಡಿಜಿಜಿಐ ಬೆಂಗಳೂರು ವಲಯದ ಹೆಚ್ಚುವರಿ ಮಹಾನಿರ್ದೇಶಕಿ ಸುಚೇತಾ ಶ್ರೀಜೇಶ್ ತಿಳಿಸಿದ್ದಾರೆ. ಆರೋಪಿಗಳು ಯಾವುದೇ ಕಾನೂನುಬದ್ಧ ವ್ಯಾಪಾರ ನಡೆಸದೆ ನಕಲಿ ಕಂಪನಿಗಳನ್ನು ಸೃಷ್ಟಿಸಿಕೊಂಡಿದ್ದು ವಹಿವಾಟು ಹೆಚ್ಚಿಸಲು ಚೈನ್ ಲಿಂಕ್ ವ್ಯಾಪಾರದಲ್ಲಿ ತೊಡಗಿದ್ದರು. ಈ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾಗಿತ್ತು.
Advertisement