ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಜಾರಿಗೆ ತರಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಘೋಷಿಸಿದ್ದಾರೆ. ಮರಣ ಇಚ್ಛೆಯ ಉಯಿಲು (AMD) ಅಥವಾ ಲಿವಿಂಗ್ ವಿಲ್ ಅನ್ನು ಸಹ ಇಲಾಖೆ ಪರಿಚಯಿಸಿದೆ ಎಂದು ಹೇಳಿರುವ ದಿನೇಶ್ ಗುಂಡೂರಾವ್, ಇದರಲ್ಲಿ ರೋಗಿಯು ಭವಿಷ್ಯದಲ್ಲಿ ತಮ್ಮ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ತಮ್ಮ ಇಚ್ಛೆಯನ್ನು ದಾಖಲಿಸಬಹುದು. ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ತಾವು ಚಿಕಿತ್ಸೆಗೆ ಒಳಪಡುವ ಮೊದಲೇ ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ಅದನ್ನು ಜಾರಿಮಾಡುವುದು ವೈದ್ಯರು ಹಾಗೂ ಬಂಧುಗಳ ಕರ್ತವ್ಯವಾಗುತ್ತದೆ. ಬದುಕುವುದಿಲ್ಲ ಎಂದು ಗೊತ್ತಿದ್ದೂ ಅನಗತ್ಯವಾದ ದುಬಾರಿ ವೆಚ್ಚದ ಚಿಕಿತ್ಸೆ ನೀಡುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
56 ಕೋಟಿ ರೂಪಾಯಿಗಳ ಭೂ ಮಂಜೂರಾತಿ ಹಗರಣ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂಮಾಲೀಕ ದೇವರಾಜು ಮತ್ತು ಮುಡಾದ ಕೆಲವು ಉನ್ನತ ಅಧಿಕಾರಿಗಳ ಹೆಸರುಗಳನ್ನು ಸೇರಿಸಲಾಗಿದೆ. ಜನವರಿ 17 ರಂದು ಜಾರಿ ನಿರ್ದೇಶನಾಲಯ 142 ನಿವೇಶನಗಳಿಗೆ ಹೊರಡಿಸಿದ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹೆಚ್ಚಿನವು ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ಸೇರಿವೆ. ಈ ತಾತ್ಕಾಲಿಕ ಜಪ್ತಿ ಆದೇಶವು ಸಿಎಂ ಮತ್ತು ಇತರರನ್ನು ನಕಲಿ ದಾಖಲೆಗಳು, ವಂಚನೆ ಮತ್ತು ಅನಗತ್ಯ ಪ್ರಭಾವವನ್ನು ಬಳಸಿಕೊಂಡು ಭೂ ಸ್ವಾಧೀನಕ್ಕೆ ಪರಿಹಾರದ ನೆಪದಲ್ಲಿ ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆಯಲು ಅಪ್ರಾಮಾಣಿಕವಾಗಿ ಮತ್ತು ಪಿತೂರಿಯಿಂದ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ತನ್ನ ತಂದೆಯನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾತ್ತಿದೆ ಎಂದು ಹೇಳಿದ್ದಾರೆ. ಇ.ಡಿ ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯ ಅವರ ಹೆಸರನ್ನು ಅಧಿಕೃತ ಸಂವಹನದಲ್ಲಿ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ಜನದಟ್ಟಣೆಯನ್ನು ಕಡಿಮೆ ಮಾಡಲು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ಧಿಪಡಿಸುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಉಪನಗರ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಬೆಂಗಳೂರು ಮಹಾನಗರ ಪ್ರದೇಶದ ಎಲ್ಲಾ ಪಟ್ಟಣ ಅಭಿವೃದ್ಧಿ ಚಟುವಟಿಕೆಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯಗತಗೊಳಿಸುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಇದೇ ವೇಳೆ ನಗರದ ಹೊರವಲಯದಲ್ಲಿರುವ 5678 ಎಕರೆ 32 ಗುಂಟೆ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ್ದ ಹಿನ್ನೆಲೆಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು ಅಧಿಕಾರಿಗಳ ವಿರುದ್ಧ ಮತ್ತು ಚಿತ್ರದುರ್ಗ, ರಾಯಚೂರು ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬ ಅಧಿಕಾರಿಗಳ ವಿರುದ್ಧ ದಾಳಿ ನಡೆಸಲಾಗಿದೆ. ಬೆಳಗಾವಿ ದಕ್ಷಿಣದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಂಜಯ್ ಮಾಂದೇಡ್, ಚಿತ್ರದುರ್ಗದ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ವ್ಯವಸ್ಥಾಪಕ ಶಶಿಧರ್, ಬಾಗಲಕೋಟೆಯ ಹೊಳಗೇರಿ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಹಿರೇಮಠ್ ಸೇರಿದಂತೆ ಹಲವು ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Advertisement