
ಬೆಂಗಳೂರು: ಕಳೆದ ತಿಂಗಳು ಆರ್ ಸಿಬಿ ತಂಡದ ಐಪಿಎಲ್ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಶ್ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮಂಗಳವಾರ ಆದೇಶಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಭಾರಿ ಮುಖ ಭಂಗವಾಗಿದೆ.
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. 64 ಮಂದಿ ಗಾಯಗೊಂಡಿದ್ದರು. ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲತೆಯಿಂದಾಗಿ ಭಾರಿ ಟೀಕೆ ವ್ಯಕ್ತವಾಗಿತ್ತು.
ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದ ರಾಜ್ಯ ಸರ್ಕಾರ, ವಿಕಾಸ್ ಕುಮಾರ್ ಜೊತೆಗೆ ಹಿಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.
ಈ ಅಮಾನತು ಆದೇಶವನ್ನು ಪ್ರಶ್ನಿಸಿ ವಿಕಾಸ್ ಕುಮಾರ್ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ನ್ಯಾಯ ಮೂರ್ತಿಗಳಾದ ಬಿ. ಕೆ. ಶ್ರೀವಾತ್ಸವ, ಸಂತೋಷ್ ಮೆಹ್ರಾ ನೇತೃತ್ವದ ಪೀಠ, ಜೂನ್ 24 ರಂದು ಕಾಯ್ದಿರಿಸಿದ್ದ ಆದೇಶವನ್ನು ಇಂದು ಪ್ರಕಟಿಸಿದ್ದು, ವಿಕಾಸ್ ಕುಮಾರ್ ಅವರ ಅಮಾನತು ರದ್ದು ಪಡಿಸಿ ಆದೇಶ ಹೊರಡಿಸಿದೆ.
ವಿಕಾಸ್ ಕುಮಾರ್ ಪರ ವಾದಿಸಿದ ಹಿರಿಯ ವಕೀಲ ಧ್ಯಾನ್ ಚಿನಪ್ಪ, ಟ್ರಿಬ್ಯೂನಲ್ ವಿಕಾಸ್ ಕುಮಾರ್ ಅಮಾನತು ರದ್ದುಗೊಳಿಸಿದ್ದು, ಸೇವಾ ನಿಯಮಗಳ ಪ್ರಕಾರ ಅವರು ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ ಎಂದು ದೃಢಪಡಿಸಿದರು. ದಯಾನಂದ್ ಮತ್ತು ತೆಕ್ಕಣ್ಣನವರ್ ಗೆ ಸಂಬಂಧಿಸಿದ ಪ್ರಕರಣಗಳನ್ನು ಸಿಎಟಿ ಪರಿಶೀಲಿಸುತ್ತಿದ್ದು, ಅವರ ಅಮಾನತು ರದ್ದುಗೊಳಿಸುವ ಸಾಧ್ಯತೆಯಿದೆ.
ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಹಿಂದಿನ ಪೊಲೀಸ್ ಕಮಿಷನರ್ ದಯಾನಂದ್, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಎಚ್ ತೆಕ್ಕಣ್ಣವರ್, ಸಹಾಯಕ ಪೊಲೀಸ್ ಆಯುಕ್ತ ಸಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಎ. ಕೆ. ಗಿರೀಶ್ ಅವರನ್ನು ಅಮಾನತು ಮಾಡಲಾಗಿತ್ತು.
ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ಅಡಿಯಲ್ಲಿ ಸರ್ತಾರ ಮೂರು ಐಪಿಎಸ್ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ಪ್ರಕ್ರಿಯೆಗಳು) ನಿಯಮಗಳು, 1965 ರ ಅಡಿಯಲ್ಲಿ ACP ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ಅಮಾನತು ಮಾಡಲಾಗಿತ್ತು.
Advertisement