News headlines 01-07-2025 | ಡಿಕೆ ಶಿವಕುಮಾರ್ ಗೆ 100 ಶಾಸಕರ ಬೆಂಬಲ ಇದೆ- ಇಕ್ಬಾಲ್ ಹುಸೇನ್; ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ: ಜಯದೇವ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ- ಸಿದ್ದರಾಮಯ್ಯ

News headlines (file pic)
ಸುದ್ದಿ ಮುಖ್ಯಾಂಶಗಳುonline desk

1. ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲಿ; 100 ಶಾಸಕರ ಬೆಂಬಲ ಇದೆ- ಶಾಸಕ ಇಕ್ಬಾಲ್ ಹುಸೇನ್

ಕಾಂಗ್ರೆಸ್ ಪಕ್ಷದೊಳಗೆ "ಅಸಮಾಧಾನ" ಮತ್ತು ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ಒನ್ ಟು ಒನ್ ಸಭೆ ಮುಂದುವರೆಸಿರುವಂತೆಯೇ ಡಿಕೆ ಶಿವಕುಮಾರ್ ಪರವಾಗಿರುವ 100 ಶಾಸಕರು, ಸಿಎಂ ಬದಲಾವಣೆ ಬಯಸಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಹಾಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಉಳಿದ ಅವಧಿಗೆ ಡಿಕೆ ಶಿವಕುಮಾರ್ ಗೆ ಅವಕಾಶ ನೀಡಬೇಕು. ಇದು ನನ್ನೊಬ್ಬನ ಇಚ್ಚೆ ಅಲ್ಲ. ಸುಮಾರು 100 ಶಾಸಕರು ಸಿಎಂ ಬದಲಾವಣೆ ಪರವಾಗಿದ್ದು, ಈ ಕ್ಷಣಕ್ಕಾಗಿ ಅನೇಕ ಶಾಸಕರು ಕಾಯುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಯಾವ ನಾಯಕತ್ವ ಬದಲಾವಣೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರೆಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆಶಿ, ಇನ್ಮುಂದೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು. ಶಾಸಕ ಇಕ್ಬಾಲ್‌ ಹುಸೇನ್ ಗೆ ನೋಟಿಸ್ ಕೊಡುತ್ತೇನೆ ಎಂದರು.

2. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಪ್ರಾಥಮಿಕ ಹೊಣೆಗಾರ- CAT, IPS ಅಧಿಕಾರಿ ಅಮಾನತು ಆದೇಶ ರದ್ದು

ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು "ಪ್ರಾಥಮಿಕ ಹೊಣೆಗಾರ" ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಪೊಲೀಸರಿಗೆ ಸಾಕಷ್ಟು ಸಮಯವನ್ನು ನೀಡಲಾಗಿಲ್ಲ. ಇದ್ದಕ್ಕಿದ್ದಂತೆ, ಆರ್‌ಸಿಬಿ ಯಾವುದೇ ಪೂರ್ವಾನುಮತಿಯಿಲ್ಲದೆ ಮೇಲೆ ತಿಳಿಸಿದ ರೀತಿಯ ತೊಂದರೆಯನ್ನು ಸೃಷ್ಟಿಸಿತು. ಪೊಲೀಸ್ ಸಿಬ್ಬಂದಿಯೂ ಮನುಷ್ಯರೇ. ಅವರು "ದೇವರು ಅಥವಾ ಮಾಂತ್ರಿಕರಲ್ಲ” ಎಂದು ಸಿಎಟಿ ಹೇಳಿದೆ. ರಾಜ್ಯ ಸರ್ಕಾರವನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿಎಟಿ, 'ಸಾಕಷ್ಟು ಆಧಾರಗಳಿಲ್ಲದೆ ರಾಜ್ಯ ಸರ್ಕಾರವು ಯಾಂತ್ರಿಕವಾಗಿ ಆದೇಶ ಹೊರಡಿಸಿತ್ತು ಎಂದು ಹೇಳಿದೆ. ಇದೇ ವೇಳೆ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಶ್ ಅವರ ಅಮಾನತು ರದ್ದುಗೊಳಿಸುವಂತೆ ಸಿಎಟಿ ಆದೇಶಿಸಿದೆ.

3. ಮಹರ್ಷಿ ವಾಲ್ಮೀಕಿ ನಿಗಮ ಹಗರಣ: ತನಿಖೆ CBI ಗೆ ವರ್ಗಾಯಿಸಲು ಹೈಕೋರ್ಟ್ ಸೂಚನೆ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್ ಎಸ್ಐಟಿಗೆ ಸೂಚನೆ ನೀಡಿದೆ. ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಸಿಬಿಐನಿಂದ ಪ್ರಕರಣದ ತನಿಖೆ ಸಮಗ್ರ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ರಿಟ್ ಅರ್ಜಿ ಸಲ್ಲಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು.

4. ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ: ಜಯದೇವ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ- ಸಿದ್ದರಾಮಯ್ಯ

ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 21 ಜನರು ಹೃದಯಾಘಾತದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿದ್ದಾರೆ. ಈ ಸಂಬಂಧ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ತಜ್ಞರ ತಂಡವು ತನಿಖೆ ನಡೆಸಿ ಶೀಘ್ರದಲ್ಲೇ ವರದಿ ಸಲ್ಲಿಸಲಿದೆ. ಇದರಲ್ಲಿ ಹೃದಯಾಘಾತಕ್ಕೆ ಕಾರಣಗಳನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದು, ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

5. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದಂತಾಗಿದೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಬರ್ನ್ಸ್ ಬ್ಲಾಕ್ (MBCC) ನಲ್ಲಿರುವ ಸೆಮಿನಾರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಬೆಂಕಿ ಸಂಭವಿಸಿದೆ ಎನ್ನಲಾಗುತ್ತಿದೆ. ಅಗ್ನಿ ಅವಘಡದಲ್ಲಿ ರಿಜಿಸ್ಟರ್ ಬುಕ್, ಬೆಡ್ ಸುಟ್ಟು ಹೋಗಿದ್ದು, ಫ್ರಿಡ್ಜ್‌ ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್ ಪೂರ್ತಿ ಬೆಂಕಿ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ವಾರ್ಡ್‌ನಲ್ಲಿ 26 ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com