ದಾವಣಗೆರೆ: ಬಿಜೆಪಿ ಮುಖಂಡನ ಮನೆಯಲ್ಲಿ UPS ಸ್ಫೋಟಗೊಂಡು ಇಬ್ಬರು ಸಾವು
ದಾವಣಗೆರೆ: ಮನೆಯೊಂದರಲ್ಲಿದ್ದ ಯುಪಿಎಸ್ ಸ್ಪೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ವಿಮಲಾಬಾಯಿ ಮತ್ತು ಕುಮಾರ್ ಜೈನ್ಎಂದು ಗುರುತಿಸಲಾಗಿದೆ. ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಹಿರೇಮಠ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲಾಗಿದೆ.
ರಾತ್ರಿ ವೇಳೆ ರುದ್ರಮುನಿ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಯುಪಿಎಸ್ ಉಪಕರಣವು ಅನಿರೀಕ್ಷಿತವಾಗಿ ಸ್ಫೋಟಗೊಂಡಿದ್ದು, ಇದರಿಂದ ದಟ್ಟ ಹೊಗೆ ಇಡೀ ಮನೆಗೆ ವ್ಯಾಪಿಸಿದೆ. ಘಟನೆ ಸಂಭವಿಸಿದಾಗ ಮನೆಯಲ್ಲಿ ಒಟ್ಟು ಆರು ಜನರಿದ್ದರು. ಇವರ ಪೈಕಿ ನಾಲ್ವರು ಮನೆಯ ಹಿಂದಿನ ಬಾಗಿಲಿನಿಂದ ತಕ್ಷಣವೇ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕುಮಾರ್ ಜೈನ್ ಮತ್ತು ವಿಮಲಾಬಾಯಿ ಅವರಿಗೆ ದಟ್ಟ ಹೊಗೆಯಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಸ್ಥಳೀಯ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುಪಿಎಸ್ ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ತಾಂತ್ರಿಕ ದೋಷ ಅಥವಾ ಉಪಕರಣದ ನಿರ್ವಹಣೆಯ ಕೊರತೆಯು ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ