
ಬೆಳಗಾವಿ: 2025–26ನೇ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಕೋರ್ಸ್‌ಗಳ ಪಠ್ಯಕ್ರಮ ಬದಲಿಸಿದ್ದೇವೆ. ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗಳು ಬಯಸುವ, ಕೌಶಲ ಆಧಾರಿತವಾದ ಈ ಪಠ್ಯಕ್ರಮ ದೇಶದಲ್ಲೇ ಮಾದರಿಯಾಗಿದೆ.
ಕೈಗಾರಿಕೋದ್ಯಮಿಗಳು ಸೇರಿ ವಿವಿಧ ರಂಗದವರ ಜತೆಗೆ ಚರ್ಚಿಸಿ ಇದನ್ನು ರೂಪಿಸಿದ್ದೇವೆ. ಇದನ್ನು ಬೋಧಿಸುವವರಿಗೂ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್ ಹೇಳಿದ್ದಾರೆ.
ವಿಟಿಯು ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು, ಐಟಿ-ಬಿಟಿ ಕಂಪನಿಗಳು, 2,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಇನ್‌ಪುಟ್‌ಗಳನ್ನು ಪಡೆದ ನಂತರ ಪಠ್ಯಕ್ರಮವನ್ನು ಸಿದ್ಧಪಡಿಸಿದೆ
ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಲಾಗುತ್ತಿದ್ದು, ಹೊಸ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದೇವೆ. ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್‌ಶಿಪ್, ತರಬೇತಿ ಮತ್ತು ಅಧ್ಯಾಪಕರು/ವಿದ್ಯಾರ್ಥಿ ವಿನಿಯಮದಂಥ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಅಂತರರಾಷ್ಟ್ರೀಯ ಶೈಕ್ಷಣಿಕ ವೇಳಾಪಟ್ಟಿ ಮಾದರಿಯಲ್ಲೇ, ನಮ್ಮ ವೇಳಾಪಟ್ಟಿಯನ್ನೂ ರೂಪಿಸಿದ್ದೇವೆ. ತ್ವರಿತವಾಗಿ ಫಲಿತಾಂಶ ಪ್ರಕಟಿಸಿ, ಉನ್ನತ ಶಿಕ್ಷಣಕ್ಕಾಗಿ ವಿದೇಶ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದವರಿಗಾಗಿ ಪ್ರತ್ಯೇಕವಾಗಿ ಎರಡು ಘಟಿಕೋತ್ಸವ ನಡೆಸುತ್ತಿದ್ದೇವೆ ಎಂದರು.
ಪ್ರಾಧ್ಯಾಪಕರು, ಕೈಗಾರಿಕೋದ್ಯಮಿಗಳು, ಪರೀಕ್ಷಾ ಮಂಡಳಿಗಳ ಸದಸ್ಯರು ಮತ್ತು ವಿಭಾಗದ ಡೀನ್ ಅಧ್ಯಕ್ಷತೆಯಲ್ಲಿರುವ ಪಠ್ಯಕ್ರಮ ಸಮಿತಿಯು ಪಠ್ಯಕ್ರಮದ ಬಗ್ಗೆ ಚರ್ಚಿಸಿದೆ ಮತ್ತು ಅದನ್ನು ಸಿದ್ಧಪಡಿಸುವಾಗ ಕೈಗಾರಿಕೋದ್ಯಮಿಗಳು, ತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗೆ ಅದರ ಬಗ್ಗೆ ಸಂವಾದ ನಡೆಸಿದೆ.
ಕ್ವಾಂಟಮ್ ಕಂಪ್ಯೂಟಿಂಗ್, ಎಐ ಮತ್ತು ಇತರ ಇತ್ತೀಚಿನ ವಿಷಯಗಳನ್ನು ಇದರಲ್ಲಿ ಸೇರಿಸಲಾಗಿದೆ. ಎಐ ಅನ್ನು ಪ್ರತಿಯೊಂದು ಎಂಜಿನಿಯರಿಂಗ್ ಕೋರ್ಸ್‌ನ ಅವಿಭಾಜ್ಯ ಅಂಗವನ್ನಾಗಿ ಮಾಡಲಾಗಿದೆ ಏಕೆಂದರೆ ಇದನ್ನು ಪ್ರತಿಯೊಂದು ತಾಂತ್ರಿಕ ಕ್ಷೇತ್ರದಲ್ಲೂ ಬಳಸಲಾಗುತ್ತಿದೆ.
Advertisement