'ಅವಮಾನದಿಂದ ಕುಗ್ಗಿ ಹೋಗಿ ರಾಜೀನಾಮೆಗೆ ಮುಂದಾಗಿದ್ದೇನೆ': ಸಿಎಂ, ಗೃಹ ಸಚಿವರು ಮನವೊಲಿಸಿದ ಬಳಿಕ ASP ನಾರಾಯಣ ಭರಮನಿ ಕರ್ತವ್ಯಕ್ಕೆ ಹಾಜರು

ತಮ್ಮ ರಾಜೀನಾಮೆ ಪತ್ರದಲ್ಲಿ ನಾರಾಯಣ ಭರಮನಿಯವರಪು ಸುದೀರ್ಘವಾಗಿ ಬರೆದಿದ್ದರು. ಸಿಎಂ ಅವರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಲು ಮುಂದಾಗಿದ್ದು ನನಗೆ ತೀವ್ರ ಅವಮಾನವಾಗಿದೆ.
Siddaramaiah tried to slap police officer
ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಲು ಮುಂದಾಗಿದ್ದ ಸಂದರ್ಭ
Updated on

ಧಾರವಾಡ: ವೇದಿಕೆಯಲ್ಲಿ ಸಾರ್ವಜನಿಕವಾಗಿ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಲು ಮುಂದಾಗಿದ್ದು, ಅದರಿಂದ ಆದ ಅವಮಾನದಿಂದ ಪೊಲೀಸ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದ ASP ನಾರಾಯಣ ಭರಮನಿಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಕಪಾಳಮೋಕ್ಷ ಮಾಡಲು ಮುಂದಾದ ಘಟನೆಯಿಂದ ತೀವ್ರ ನೊಂದು ಸರ್ಕಾರಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ಹೇಳಿದ್ದರು. ಇದಾದ ಬಳಿಕ ಸಿಎಂ ಮತ್ತು ಗೃಹ ಸಚಿವರು ಕರೆ ಮಾಡಿ ಸಮಾಧಾನ ಮಾಡಿ ನಿವೃತ್ತಿ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಇಂದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದು ಎಎಸ್ ಪಿ ನಾರಾಯಣ ಭರಮನಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮನಸಿನ ಭಾವನೆಗಳನ್ನು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಿಳಿಯಪಡಿಸಿದ್ದೇನೆ. ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಿಎಂ ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳುತ್ತದೆ. ಈಗ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದು ಹೇಳಿದರು.

ತಮ್ಮ ರಾಜೀನಾಮೆ ಪತ್ರದಲ್ಲಿ ನಾರಾಯಣ ಭರಮನಿಯವರಪು ಸುದೀರ್ಘವಾಗಿ ಬರೆದಿದ್ದರು. ಸಿಎಂ ಅವರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಲು ಮುಂದಾಗಿದ್ದು ನನಗೆ ತೀವ್ರ ಅವಮಾನವಾಗಿದೆ, ಈ ಘಟನೆಯಿಂದ ಬಹಳ ನೊಂದು ಹಿರಿಯ ಪೊಲೀಸ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆಯಲು ಇಚ್ಛಿಸುತ್ತಿದ್ದೇನೆ ಎಂದಿದ್ದರು.

ನಾರಾಯಣ ಭರಮನಿ ಬರೆದ ಪತ್ರದಲ್ಲಿ ಏನಿದೆ?

‘ಮಾನ್ಯ ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿ ಸಲ್ಲಿಸಲು ಮುಂದಾಗಿದ್ದೇನೆ. ನಾನು, ಎನ್. ವಿ. ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಧಾರವಾಡ. 1994 ನೇ ಸಾಲಿನಲ್ಲಿ ಪಿ.ಎಸ್.ಐ ಆಗಿ ನೇಮಕಗೊಂಡು ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಪಿಎಸ್​​ಐ ಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರೆಗೆ ವಿವಿಧ ಹುದ್ದೆಗಳಲ್ಲಿ ಕಾನೂನು ಬದ್ಧ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ದಿನಾಂಕ : 28/04/2025 ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರೀ ಸಿದ್ದರಾಮಯ್ಯ. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ರವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ಬಂದೋಬಸ್ತ್ ಕರ್ತವ್ಯಕ್ಕೆ ಮೇಲಾಧಿಕಾರಿಗಳು ನನ್ನನ್ನು ನಿಯೋಜಿಸಿ ವೇದಿಕೆಯ ಉಸ್ತುವಾರಿ ವಹಿಸಿದರು’’ ಎಂದು ಪತ್ರದಲ್ಲಿ ಭರಮನಿ ಉಲ್ಲೇಖಿಸಿದ್ದಾರೆ.

Siddaramaiah tried to slap police officer
ಹೆಚ್ಚುವರಿ ಎಸ್‌ಪಿ ವಿರುದ್ಧ ಸಿಎಂ ಗರಂ; ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ!

ಮುಂದುವರಿದು, ‘‘ನೀಡಲಾದ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ನನ್ನ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದವನು. ವೇದಿಕೆಯ ಮೇಲೆ ರಾಜ್ಯ ಸರ್ಕಾರದ ಅನೇಕ ಮಂತ್ರಿಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಧುರೀಣರು ಜನರನ್ನುದ್ದೇಶಿಸಿ ಭಾಷಣ ಮಾಡಿದರು. ತದನಂತರ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದರಾಮಯ್ಯ ರವರು ಭಾಷಣ ಮಾಡಲು ಪ್ರಾರಂಭಿಸಿದರು. ಭಾಷಣ ಮುಂದುವರೆಸಿದ ಸುಮಾರು 10 ನಿಮಿಷಗಳ ನಂತರ ಸಾರ್ವಜನಿಕರು/ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕುಳಿತು ಕೊಂಡಿದ್ದ ಸಭಾ ಸ್ಥಳದಲ್ಲಿ ಬೇರೊಬ್ಬ ಎಸ್.ಪಿ ಮಟ್ಟದ ಅಧಿಕಾರಿ ಉಸ್ತುವಾರಿಯಲ್ಲಿದ್ದು, ಆ ಸ್ಥಳದಲ್ಲಿ ಯಾರೋ ನಾಲೈದು ಮಹಿಳೆಯರು ಕಪ್ಪು ಬಾವುಟ ತೋರಿಸಿ ಘೋಷಣೆ ಕೂಗಿದಾಗ, ಭಾಷಣ ಮಾಡುತ್ತಾ ಇದ್ದ ಮಾನ್ಯ ಮುಖ್ಯಮಂತ್ರಿಗಳು ಭಾಷಣ ನಿಲ್ಲಿಸಿ ನನ್ನ ಕಡೆ ಕೈ ಮಾಡಿ ‘ಏಯ್ ಯಾವನೊ ಇಲ್ಲಿ ಎಸ್​​ಪಿ ಬಾರಯ್ಯ ಇಲ್ಲಿ’ ಎಂದು ಏರು ಧ್ವನಿಯಲ್ಲಿ ಅಬ್ಬರಿಸಿದಾಗ ಅಲ್ಲಿ ಸ್ಥಳೀಯ ಎಸ್​​​ಪಿಯಾಗಲಿ ಅಥವಾ ಡಿಸಿಪಿಯಾಗಲಿ ಇರದೇ ಇದ್ದುದ್ದರಿಂದ, ಅವರ ಕರೆಗೆ ಓಗೊಟ್ಟು ವೇದಿಕೆ ಮೇಲೆ ಹೋದೆನು. ಮತ್ತು ಮಾನ್ಯರಿಗೆ ಗೌರವಸೂಚಕವಾಗಿ ಅತೀ ವಿನಮ್ರತೆಯಿಂದ ವಂದಿಸಿ ನಿಂತುಕೊಂಡೆನು. ತಕ್ಷಣ ಏನೂ ಮಾತನಾಡದೆ ಏಕಾ ಏಕಿ ಕೈ ಎತ್ತಿ ನನಗೆ ‘ಕಪಾಳ ಮೋಕ್ಷ’ ಮಾಡಲು ಬಂದರು. ಕೂಡಲೇ ನಾನು ಒಂದು ಹೆಜ್ಜೆ ಹಿಂದೆ ಸರಿದು ಸಾರ್ವಜನಿಕವಾಗಿ ಆಗಬಹುದಾಗಿದ್ದ ಕಪಾಳಮೋಕ್ಷದಿಂದ ತಪ್ಪಿಸಿಕೊಂಡನು. ನಾ ಮಾಡದ ತಪ್ಪಿಗೆ ಅವಮಾನಿತನಾಗಿದೆ. ಈ ಘಟನೆಯನ್ನು ನಿರಂತರವಾಗಿ ಟಿವಿ ದೃಶ್ಯ ಮಾಧ್ಯಮಗಳಲ್ಲಿ 2 ದಿನಗಳ ಕಾಲ ಬಿತ್ತರಿಸಿದ್ದನ್ನು ತಾವೂ ಕೂಡ ಗಮನಿಸಿರುತ್ತೀರಿ ಎಂದು ಭಾವಿಸಿದ್ದೇನೆ’’.

Siddaramaiah tried to slap police officer
ಪೊಲೀಸ್ ಅಧಿಕಾರಿ ಮೇಲೆ ಕಪಾಳಮೋಕ್ಷಕ್ಕೆ ಸಿದ್ದರಾಮಯ್ಯ ಮುಂದು: ಸ್ಥೈರ್ಯ ಕುಗ್ಗಿಸುವ ನಡತೆ; ಹಿರಿಯ ಅಧಿಕಾರಿಗಳು ತೀವ್ರ ಆಕ್ಷೇಪ

ಬಹಳ ಅವಮಾನವಾಗಿದೆ

ಸಾರ್ವಜನಿಕವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ ಕಪಾಳ ಮೋಕ್ಷ ತಪ್ಪಿಸಿಕೊಂಡಿದ್ದೇನೋ ಸರಿ. ಆದರೆ ಸಾರ್ವಜನಿಕವಾಗಿ ಆದ ಅವಮಾನದಿಂದಲ್ಲ. ಅದೇ ವೇದಿಕ ಮೇಲೆ ರಾಜ್ಯದ ಎಲ್ಲಾ ಕಡೆಯಿಂದ ಬಂದ ರಾಜಕೀಯ ಮುಖಂಡರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು. ಅಲ್ಲದೇ ರಾಜ್ಯಾದ್ಯಂತ ಸುದ್ದಿ ಬಿತ್ತರಿಸುವ ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ವರದಿಗಾರರು ಇದ್ದರು. ಅದೂ ಅಲ್ಲದೆ ನನ್ನ ಇಲಾಖೆಯ ಮತ್ತು ಇತರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಜನರಿದ್ದರು. ಅವರೆಲ್ಲರ ಮುಂದೆ ಅವಮಾನಕ್ಕೊಳಗಾದರೂ ಇಲಾಖೆ ಮೇಲಿನ ಗೌರವದಿಂದಾಗಿ ಮತ್ತು ಮಾನ್ಯ ಮುಖ್ಯ ಮಂತ್ರಿಗಳ ಪದವಿಗೆ ಚ್ಯುತಿ ಬಾರದಿರಲಿ ಎಂಬ ಕಾರಣಕ್ಕಾಗಿ ಮರು ಮಾತಾಡದ ವೇದಿಕೆಯಿಂದ ಕೆಳಗಿಳಿದು ಬಂದಿದ್ದೆ ಎಂದು ಭರಮನಿ ಉಲ್ಲೇಖಿಸಿದ್ದಾರೆ.

ಮಾನಸಿಕ ವೇದನೆ ಹೆಚ್ಚಾಯಿತು

ಸಮವಸ್ತ್ರದಲ್ಲಿದ್ದ ನನಗೆ ಸಾರ್ವಜನಿಕವಾಗಿ ಅವಮಾನಿಸಿ ನನ್ನ ಮತ್ತು ನನ್ನ ಇಲಾಖೆಯ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಿದ ಮಾನ್ಯ ಮುಖ್ಯ ಮಂತ್ರಿಗಳ ವರ್ತನೆಯನ್ನು ಇಡೀ ರಾಜ್ಯದಲ್ಲಿ ದೃಶ್ಯಮಾದ್ಯಮಗಳ ಮೂಲಕ ಬಿತ್ತರಿಸಲಾಗಿತ್ತು. ಘಟನೆಯಿಂದ ಮನಸ್ಸಿಗೆ ಆಘಾತವಾಗಿ, ಯಾರಲ್ಲಿ ಏನನ್ನೂ ಪ್ರಸ್ತಾಪಿಸದೆ ಮನೆಗೆ ಹೋದೆನು. ಮನೆಯಲ್ಲಿ ಸ್ಮಶಾನ ಮೌನ. ನನ್ನನ್ನು ನೋಡಿದ ಮಡದಿ ಮತ್ತು ಮಕ್ಕಳ ದುಃಖ ಕಟ್ಟೆಯೊಡೆದು ಭೋರ್ಗರೆಯಿತು. ಇಡೀ ದಿನ ಮೌನವೇ ಮಾತಾಯಿತು. ನನಗೆ ಮತ್ತು ಮಡದಿಗೆ ಹಿತೈಷಿಗಳಿಂದ ಬಂದ ದೂರವಾಣಿ ಕರೆಗಳಿಗೆ ಉತ್ತರಿಸಲಾಗದಷ್ಟು ದುಃಖಿತರಾಗಿದ್ದೆವು. ಇದರಿಂದಾಗಿ ನಾನು ಮತ್ತು ನನ್ನ ಕುಟುಂಬ ಮನೋವ್ಯಾಕುಲತೆಗೆ ಒಳಗಾದೆವು. ಇಷ್ಟಾದರೂ ಮಾನ್ಯ ಮುಖ್ಯಮಂತ್ರಿಗಳಾಗಲಿ ಅಥವಾ ಅವರ ಪರವಾಗಿ ಸರ್ಕಾರ ಮಟ್ಟದ ಅಧಿಕಾರಿಗಳಾಗಲಿ ಅಥವಾ ನಮ್ಮ ಇಲಾಖೆಯ ನೆಚ್ಚಿನ ಹಿರಿಯ ಅಧಿಕಾರಿಗಳಾಗಲಿ ನನ್ನನ್ನು ಸಾಂತ್ವಾನಿಸುವ ಪ್ರಯತ್ನ ಮಾಡಲಿಲ್ಲ. ಅಲ್ಲದೇ ನನ್ನ ಸಹೋದ್ಯೋಗಿಗಳು ಕೂಡ ನನಗಾದ ಅವಮಾನವನ್ನು ಪ್ರತಿಭಟಿಸಿ ನೈತಿಕ ಬೆಂಬಲ ವ್ಯಕ್ತಪಡಿಸಲೂ ಇಲ್ಲ. ಇದರಿಂದಾಗಿ ಮತ್ತಷ್ಟು ಮಾನಸಿಕ ವೇದನೆ ಹೆಚ್ಚಾಯಿತು ಎಂದು ಭರಮನಿ ಅಳಲು ತೋಡಿಕೊಂಡಿದ್ದಾರೆ.

ಸಾರ್ವಜನಿಕ ವೇದಿಕೆಯ ಮೇಲೆ ಮುಖ್ಯಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ, ಅವಮಾನಗೊಂಡ ನನಗೆ ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದು ಇದನ್ನು ಅಂಗೀಕರಿಸಬೇಕೆಂದು ನಾರಾಯಣ ಭರಮನಿ ವಿನಂತಿಸಿಕೊಂಡಿದ್ದರು.

ಈ ಪ್ರಕರಣ ಬಗ್ಗೆ ವಿರೋಧಪಕ್ಷ ಬಿಜೆಪಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com