Covid-19 ಲಸಿಕೆ-ಹೃದಯಾಘಾತ ಬಗ್ಗೆ ಸಿಎಂ ಸಿದ್ದರಾಮಯ್ಯ ಅನಿಸಿಕೆ: Kiran Mazumdar-Shaw ಆಕ್ಷೇಪ

ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಠಿಣ ಶಿಷ್ಠಾಚಾರಗಳನ್ನು ಅನುಸರಿಸಿದ ನಂತರ ಲಸಿಕೆಗಳನ್ನು ಅನುಮೋದಿಸಲಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
Kiran Mazumdar Shah-Siddaramaiah
ಕಿರಣ್ ಮಜುಂದಾರ್ ಷಾ-ಸಿದ್ದರಾಮಯ್ಯ
Updated on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ -19 ಲಸಿಕೆಯಿಂದ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆಯೇ ಎಂದು ಸಂದೇಹ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಈಗ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಸ್ಪಷ್ಟನೆ ನೀಡಿತ್ತು.

ಇಂದು ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2020-21ರಲ್ಲಿ ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್-19 ಲಸಿಕೆಗಳನ್ನು ತುರ್ತು ಬಳಕೆ ಅಧಿಕಾರ ಚೌಕಟ್ಟಿನಡಿಯಲ್ಲಿ ಅನುಮೋದಿಸಲಾಗಿದೆ. ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಠಿಣ ಶಿಷ್ಠಾಚಾರಗಳನ್ನು ಅನುಸರಿಸಿದ ನಂತರ ಲಸಿಕೆಗಳನ್ನು ಅನುಮೋದಿಸಲಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಜುಂದಾರ್ ಶಾ, ಈ ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿದೆ ಎಂದು ಹೇಳುವುದು ವಾಸ್ತವಿಕವಾಗಿ ತಪ್ಪು ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿನ ಆತಂಕಕಾರಿ ಏರಿಕೆಯನ್ನು ಗಮನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ವರದಿಯಾಗುತ್ತಿರುವ ಸಾವುಗಳ ಸರಣಿಗೆ "ಆತುರದಿಂದ ಅನುಮೋದಿಸಲಾದ" COVID-19 ಲಸಿಕೆಗಳು ಒಂದು ಕಾರಣವಾಗಬಹುದು ಎಂದು ಹೇಳಿದ್ದಾರೆ.

Kiran Mazumdar Shah-Siddaramaiah
ಯುವಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೊರೊನಾ ಲಸಿಕೆ ಈ ಸಾವುಗಳಿಗೆ ಕಾರಣ ಎಂಬುದನ್ನು ಅಲ್ಲಗಳೆಯಲಾಗದು: ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಪೋಸ್ಟ್‌ಗೆ ಪ್ರತ್ಯುತ್ತರವಾಗಿ ಮಜುಂದಾರ್ ಶಾ, "ಈ ಲಸಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಎಲ್ಲಾ ಲಸಿಕೆಗಳಂತೆ, ಬಹಳ ಕಡಿಮೆ ಸಂಖ್ಯೆಯ ವ್ಯಕ್ತಿಗಳಲ್ಲಿ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ದೂಷಿಸುವ ಬದಲು, ಅವುಗಳ ಅಭಿವೃದ್ಧಿಯ ಹಿಂದಿನ ವಿಜ್ಞಾನ ಮತ್ತು ಅಂಕಿಅಂಶ-ಚಾಲಿತ ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸಂಬಂಧಿತ ಸಾವುಗಳು ಹೆಚ್ಚಾಗಿದ್ದು, ಕಳೆದ 40 ದಿನಗಳಲ್ಲಿ 20 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಮೃತಪಟ್ಟವರಲ್ಲಿ ಬಹುತೇಕರು 19ರಿಂದ 45 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ.

Kiran Mazumdar Shah-Siddaramaiah
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ, ಈ ಸರಣಿ ಸಾವುಗಳಿಗೆ ನಿಖರವಾದ ಕಾರಣವನ್ನು ಗುರುತಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು, ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವಾದ್ಯಂತ ಹಲವಾರು ಅಧ್ಯಯನಗಳು ಇತ್ತೀಚೆಗೆ ಸೂಚಿಸಿದಂತೆ, COVID ಲಸಿಕೆಯ ಆತುರದ ಅನುಮೋದನೆ ಮತ್ತು ವಿತರಣೆಯು ಈ ಸಾವುಗಳಿಗೆ ಕಾರಣವಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಮುಖ್ಯಮಂತ್ರಿಗಳು ಬರೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com