
ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ 1,777 ಎಕರೆ ಭೂ ಸ್ವಾಧೀನವನ್ನು ಕೈ ಬಿಡುವವರೆಗೆ ಹೋರಾಟ ಮುಂದುವರೆಸಲು ರೈತರು, ಹೋರಾಟಗಾರರು ತೀರ್ಮಾನಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ, ಅಪೂರ್ಣವಾಗಿದ್ದು, ಜುಲೈ 15 ರಂದು ನಡೆಯಲಿರುವ ಮತ್ತೊಂದು ಸಭೆಯವರೆಗೂ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ನಿರಂತರವಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಹೋರಾಟಗಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಲ್ಲಿ ನಟ ಪ್ರಕಾಶ್ ರಾಜ್ ಮತ್ತಿತರರು ಮುಂಚೂಣಿಯಲ್ಲಿದ್ದಾರೆ.
ಈ ಮಧ್ಯೆ ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಕಾಶ್ ರಾಜ್ ವಿರೋಧ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ರಾಜ್ ಹೋರಾಟ ಯಾಕೆ? ಅವರು ಬಹುಭಾಷಾ ನಟರಲ್ವಾ? ಕರ್ನಾಟಕದಲ್ಲಿ ಮಾತ್ರವಲ್ಲ, ಯುಪಿ, ಅಸ್ಸಾಂನಲ್ಲೂ ಹೋರಾಟ ಮಾಡಲಿ, ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದು ಕಿಡಿಕಾರಿದರು.
ಕೆಐಎಡಿಬಿ ಭೂಸ್ವಾಧೀನದ ನೋಟಿಫಿಕೇಷನ್ ಅಂತಿಮ ಆಗಿದೆ. ಈಗ ಡಿನೋಟಿಫಿಕೇಷನ್ ಮಾಡಬೇಕಾಗುತ್ತದೆ. ಅದಕ್ಕಾಗಿ ಒಂದಿಷ್ಟು ಕಾನೂನು ತೊಡಕುಗಳಿವೆ ಅವುಗಳ ಬಗ್ಗೆ ಅಡ್ವೋಕೇಟ್ ಜನರಲ್ ಹತ್ತಿರ ಚರ್ಚೆ ಮಾಡುತ್ತೇವೆ ಎಂದರು.
ಕಾನೂನಾತ್ಮಕ ಅಂಶಗಳ ಬಗ್ಗೆ ಈಗ ಹೇಳುವುದಿಲ್ಲ. ಸರ್ಕಾರಕ್ಕೆ ನಷ್ಟ ಆಗುತ್ತಾ ಎನ್ನುವ ಬಗ್ಗೆ ಹೇಳಲು ಹೋಗುವುದಿಲ್ಲ. ಆದರೆ ಯಾರಿಗೂ ಕೂಡ ಅನ್ಯಾಯ ಆಗದಂತೆ ನೋಡಿಕೊಳ್ಳುವಂತೆ ಸಿಎಂ ಹಾಗೂ ಕಾನೂನು ತಜ್ಞರ ಜೊತೆಗೆ ಚರ್ಚಿಸುತ್ತೇವೆ ಎಂದು ಹೇಳಿದರು.
Advertisement