
ಬೆಂಗಳೂರು: ಭಾಷೆ ಕೇವಲ ಸಂವಹನ ಸಾಧನವಲ್ಲ, ವ್ಯಕ್ತಿ, ಜನಾಂಗ, ಪ್ರಾದೇಶಿಕತೆಯ ಅಸ್ಮಿತೆ. ಜನರನ್ನು, ಸಂಸ್ಕೃತಿಯನ್ನು ಬೆಸೆಯುವ ವಾಹಕವೂ ಹೌದು. ಸ್ವಭಾಷೆಗೆ ಒತ್ತು ನೀಡಿ ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ 32ನೇ ಚಾತುರ್ಮಾಸ್ಯ ವ್ರತ ಆಷಾಢ ಶುದ್ಧ ಪೂರ್ಣಿಮೆಯಿಂದ ಅಂದರೆ ಜುಲೈ 10ರಿಂದ ಭಾದ್ರಪದ ಶುದ್ಧ ಪೂರ್ಣಿಮೆ ಸೆಪ್ಚೆಂಬರ್ 7ರವರೆಗೆ ಗೋಕರ್ಣದ ಅಶೋಕೆಯಲ್ಲಿ ನೆರವೇರಲಿದೆ.
ಇಂದು ಮಾತೃಭಾಷೆ ಮಾತನಾಡುವವರ ಸಂಖ್ಯೆ ಎಲ್ಲಾ ಜಾತಿ, ಜನಾಂಗದವರಲ್ಲಿ ಕಡಿಮೆಯಾಗುತ್ತಿದೆ. ಶಿಕ್ಷಣ, ವ್ಯವಹಾರ, ಉದ್ಯೋಗ, ವಲಸೆ, ವಿಭಕ್ತ ಕುಟುಂಬ ಪದ್ಧತಿ, ನಗರ ಜೀವನ ಪ್ರಭಾವದಿಂದ ಮಾತೃಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾತೃಭಾಷೆಯ ಸ್ಥಾನದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಇತ್ಯಾದಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದಿನ ಮಕ್ಕಳಲ್ಲಿ ಮಾತೃಭಾಷೆ ಮರೆತುಹೋಗುತ್ತಿದೆ.
ಮರೆತು ಹೋದ ಮನೆ ಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿಯಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳುತ್ತಾರೆ.
ಶುದ್ಧವಾದ ಮಾತೃ ಭಾಷೆ ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ನಮ್ಮ ಮಕ್ಕಳಲ್ಲಿ ನಾವು ಮಾತೃಭಾಷೆ ಮಾತನಾಡದೆ ಇಂಗ್ಲಿಷ್, ಹಿಂದಿ ಅಥವಾ ಬೇರೆ ಭಾಷೆಗಳಲ್ಲಿ ಮಾತನಾಡುವುದು ಘೋರ ತಪ್ಪು ಎನ್ನುತ್ತಾರೆ ಶ್ರೀಗಳು.
ನಮ್ಮ ಮಾತೃಭಾಷೆಯಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಪದಗಳು ಇಂದು ಮರೆತುಹೋಗುತ್ತಿವೆ. ನಮ್ಮ ಭಾಷೆಯ ಬಗ್ಗೆ ನಮಗೆ ಕೀಳರಿಮೆ, ತಿರಸ್ಕಾರ ಇದೆ, ಇಂತಹ ಮನೋವೃತ್ತಿ ಇರಬಾರದು.
ಮನೆಮಾತು ಮರೆತು ಹೋಗಿದೆ. ಉಪ ಭಾಷೆಗಳು ಬಹುತೇಕ ನಶಿಸಿವೆ. ಕನ್ನಡ ಮಾತನಾಡುವ ಸಂದರ್ಭದಲ್ಲೂ ಕನ್ನಡ ಕಡೆಗಣಿಸುತ್ತೇವೆ. ನಮ್ಮ ಭಾಷೆಯಲ್ಲಿ ಬೇರೆ ಭಾಷೆ ತೂರಿಕೊಂಡಿದೆ. ಈ ಬಾರಿಯ ಚಾತುರ್ಮಾಸ್ಯ ಭಾಷೆ ಶುದ್ಧಗೊಳಿಸುವ ಪ್ರಯತ್ನಕ್ಕೆ ಶ್ರೀಕಾರ ಹಾಕಲಿದೆ, ಚಾತುರ್ಮಾಸ್ಯ ಶುಭಾರಂಭವಾಗಿದ್ದು ಅಭಿಯಾನ ನಿರಂತರವಾಗಿ ಸಾಗಲಿದೆ ಎಂದರು.
ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆ ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.
ಯಾವ ಭಾಷೆಯೂ ಮೇಲೂ ಅಲ್ಲ, ಕೀಳು ಅಲ್ಲ
ಭಾರತದ ಪ್ರತಿಯೊಂದು ರಾಜ್ಯದ ಜನರೂ ಅಲ್ಲಿನ ಮಾತೃಭಾಷೆ ಮಾತನಾಡುತ್ತಾರೆ. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಸಾಕಷ್ಟಿದೆ, ಹಲವು ಶಬ್ದಗಳ ಕೊಡು-ಕೊಳ್ಳುವಿಕೆ ಇದೆ, ಹೀಗಾಗಿ ಯಾವ ಭಾಷೆಯೂ ಮೇಲೂ ಅಲ್ಲ, ಕೀಳೂ ಅಲ್ಲ, ಪರಸ್ಪರ ಕೊಡು-ಕೊಳ್ಳುವಿಕೆಯಿಂದ ಭಾಷೆಯ ಬೆಳವಣಿಗೆಯಾಗಿದೆ. ಒಂದು ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿದ್ದು, ಮೇಲು-ಕೀಳು ಎಂಬ ಭಾವನೆ, ಚರ್ಚೆಯ ಅಗತ್ಯವಿಲ್ಲ ಎಂದರು.
Advertisement