
ಕೆಂಪೇಗೌಡ ಏರ್ ಪೋರ್ಟ್: ಹೈಕಮಾಂಡ್ ಸಮಯ ನಿಗದಿ ಮಾಡಿದಾಗ ಪಕ್ಷ, ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚೆ ಮಾಡಲು ದೆಹಲಿಗೆ ಭೇಟಿ ನೀಡುತ್ತಿರುತ್ತೇವೆ. ಪಕ್ಷ ಸಂಘಟನೆ ವಿಚಾರದಲ್ಲಿ ಕೆಲವು ತೀರ್ಮಾನಗಳನ್ನು ಮಾಡಲು ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡುತ್ತೇನೆ ಎಂದು ದೆಹಲಿಗೆ ಹೊರಟಿರುವ ಡಿಸಿಎಂ ಡಿ ಕೆ ಶಿವಕುಮಾರ್ ತಿಳಸಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಮಧ್ಯಾಹ್ನ 12 ಗಂಟೆಗೆ ಕೇಂದ್ರ ಅರಣ್ಯ ಇಲಾಖೆ ಸಚಿವ ಭೂಪೇಂದರ್ ಯಾದವ್ ಅವರು ಸಮಯ ನೀಡಿದ್ದು, ಎತ್ತಿನಹೊಳೆ ಮತ್ತು ಮಹದಾಯಿ ನದಿಯ ಕಳಸಾ ಬಂಡೂರಿ ನಾಲಾ ಯೋಜನೆಯ ವಿಚಾರದಲ್ಲಿ ಕೆಲವು ಅನುಮತಿಗಳು ಬಾಕಿ ಇರುವುದರಿಂದ ಕೆಲಸ ಆರಂಭಿಸಲು ಆಗುತ್ತಿಲ್ಲ.
ಕೇಂದ್ರ ಸರ್ಕಾರ ಕೇಳಿರುವ ದಾಖಲೆಗಳನ್ನು ನಾವು ಒದಗಿಸಿಕೊಟ್ಟಿದ್ದೇವೆ. ಬದಲಿ ಜಮೀನನ್ನು ಕೂಡ ಅರಣ್ಯ ಇಲಾಖೆಗೆ ನೀಡಿದ್ದೇವೆ. ಅದಕ್ಕೆ ಆಕ್ಷೇಪಣೆ ಹಾಕಿದ್ದರು, ಅದಕ್ಕೆ ಸರ್ಕಾರದ ಕಡೆಯಿಂದ ಬದಲಿ ಭೂಮಿ ಮಂಜೂರಿನ ವ್ಯವಸ್ಥೆ ಮಾಡಿದ್ದೇವೆ ಎಂದರು.
ಸಂಜೆ ನೀರಾವರಿ ಸಚಿವರ ಭೇಟಿ
ಇಂದು ಸಂಜೆ 4 ಗಂಟೆಗೆ ಕೇಂದ್ರ ನೀರಾವರಿ ಸಚಿವ ಸಿ ಆರ್ ಪಾಟೀಲ್ ಭೇಟಿ ಮಾಡಿ ಕೃಷ್ಣ ಜಲ ವಿವಾದ ನ್ಯಾಯಮಂಡಳಿ (KWDT) ಪ್ರಶಸ್ತಿ ಮತ್ತು ತುಂಗಭದ್ರಾ ಅಣೆಕಟ್ಟು ವಿಚಾರದಲ್ಲಿ ಕೆಲವು ಅನುದಾನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ದಿನಾಂಕ ನಿಗದಿಮಾಡಲು ಒತ್ತಾಯ ಮಾಡಲಾಗುವುದು. ಇಂದು ಕಾನೂನು ತಜ್ಞರ ಜೊತೆ ಕೂಡ ಚರ್ಚಿಸುತ್ತೇವೆ. ಕೆಲವು ಬಿಡಿಎ ಕೇಸುಗಳು ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇವೆ. ಅದನ್ನು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನಾಳೆ ನಾನು ವಕೀಲರ ಜೊತೆ ಪರಾಮರ್ಶೆ ನಡೆಸಲಾಗುವುದು.
Advertisement