
ಬೆಂಗಳೂರು: ಅನ್ನಭಾಗ್ಯ ಪಡಿತರ ಸಾಗಾಣಿಕೆ ಲಾರಿ ಮುಷ್ಕರಕ್ಕೆ ಮಣಿದ ಸರ್ಕಾರ 2025 ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ರೂ.244 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ರೂ. 2,082.99 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಇದು ನಾಲ್ಕು ತಿಂಗಳ ಅವಧಿಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಮತ್ತಿತರ ಉದ್ದೇಶಗಳಿಗೆ ಆದ ವೆಚ್ಚಕ್ಕಾಗಿ ರೂ. 244 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.
ನಾಲ್ಕು ತಿಂಗಳ ಪಡಿತರ ಆಹಾರ ಧಾನ್ಯ ಸಾಗಾಣಿಕೆ ವೆಚ್ಚಕ್ಕಾಗಿ ಲಾರಿ ಮಾಲೀಕರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಬಾಕಿ ಹಣಕ್ಕಾಗಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಂಗಳವಾರ ಘೋಷಿಸಿದ್ದರು. ಇದರಿಂದ ಬೆದರಿದ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿದೆ.
ಈ ಹಿಂದೆ ಬಿಡುಗಡೆಯಾಗಿದ್ದ 21.79 ಕೋಟಿ ರೂ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಬಳಕೆಯಾಗದೆ ಉಳಿದಿದ್ದು, ಪ್ರಾಸಂಗಿಕ ವೆಚ್ಚಗಳನ್ನು ಪೂರೈಸಲು ಕೊರತೆಯಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಆದಾಗ್ಯೂ, ರೂ. 244.10 ಕೋಟಿ ಪಡಿತರ ಸಾಗಾಟ ವೆಚ್ಚ ಬಿಡುಗಡೆಗೆ ಸೋಮವಾರ ಸಮ್ಮತಿಸಿದೆ.
ಈ ಹಣವನ್ನು 2025-26 ರ ಆರ್ಥಿಕ ವರ್ಷಕ್ಕೆ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವುದು. ಹಣವನ್ನು ಖಜಾನೆ-2 ಹಣಕಾಸು ನಿರ್ವಹಣಾ ಸಾಫ್ಟ್‌ವೇರ್ ಸಿಸ್ಟಮ್ ಮೂಲಕ ನೇರವಾಗಿ ಆಡಳಿತ ಇಲಾಖೆಯಿಂದ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬೆಂಗಳೂರು ನಗರ ಜಿಲ್ಲೆಗೆ ರವಾನಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ಹಣದ ಕೊರತೆ ಇಲ್ಲ ಎಂದು ಹೇಳಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ರೂ. 199 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Advertisement