ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಮೈಸೂರು ದಸರಾ ಮಹೋತ್ಸವದಲ್ಲಿ ಆಕರ್ಷಣೆಯಾಗಿ ವೈಮಾನಿಕ ಪ್ರದರ್ಶನ ಆಯೋಜಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ರಾಜನಾಥ್ ಸಿಂಗ್ ಸಹ ಸಮ್ಮತಿಸಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್ ಮಾಡಿ ಎಂದು ಮನವಿ ಮಾಡಲಾಗಿದೆ. ಉತ್ತರಪ್ರದೇಶ, ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ಇದೆ. ಅದೇ ರೀತಿ ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್ ಗೆ ಮನವಿ ಮಾಡಿದ್ದೇವೆ. ಹಾಗಯೇ, ರಾಜ್ಯದಲ್ಲಿ ಮೂರು ಪ್ರಮುಖ ಯೋಜನೆಗಳಾದ ಸುರಂಗ ಯೋಜನೆ, ವಿಮಾನ ನಿಲ್ದಾಣ ಬಳ್ಳಾರಿ ರಸ್ತೆಯ ಲಿಂಕ್ ರಸ್ತೆ ಮತ್ತು ಫ್ಲೈಓವರ್ ಡಬಲ್ ಡೆಕ್ಕರ್ ರಸ್ತೆಗಳ ಅನುಷ್ಠಾನಕ್ಕಾಗಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ನೀಡುವಂತೆ ಮನವಿ ಮಾಡಿದ್ದು ಇದಕ್ಕೆ ಸಚಿವರೂ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಭೇಟಿ ಮಾಡಿ ಚರ್ಚಿಸಿದರು. ನಾಳೆ ರಾಹುಲ್ ಗಾಂಧಿ ಅವರನ್ನು ಸಮಯ ಕೇಳಿದ್ದೇವೆ ಸಮಯ ಸಿಕ್ಕರೆ ಅವರನ್ನೂ ಭೇಟಿ ಮಾಡುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಹಾಗೂ ಕೋಲಾರದಲ್ಲಿ ನಿನ್ನೆ NIA ಅಧಿಕಾರಿಗಳು ದಾಳಿ ನಡೆಸಿದ್ದು, ಉಗ್ರರಿಗೆ ನೆರವು ನೀಡಿದ ಆರೋಪದಡಿ ಮೂವರು ಶಂಕಿತ ಉಗ್ರರನ್ನ ಬಂಧಿಸಿದ್ದಾರೆ. ದಕ್ಷಿಣ ಭಾರತದ ಹಲವು ಸ್ಫೋಟಗಳ ಮಾಸ್ಟರ್‌ಮೈಂಡ್ ನಾಸೀರ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಸುಳಿವು ಸಿಕ್ಕುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮ್ಮದ್‌ನ ತಾಯಿ ಫಾತೀಮಾಳನ್ನು ಬಂಧಿಸಿದ್ದರು. ಇಂದು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು ಬಂಧಿತರನ್ನು 6 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅನೇಕ ಹಿರಿಯ ಶಾಸಕರುಗಳು ಸ್ವಪಕ್ಷದ ವಿರುದ್ಧವೇ ಆರೋಪಗಳನ್ನು ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ರಾಜ್ಯಕ್ಕೆ ಭೇಟಿ ನೀಡಿ ಕೈ ಶಾಸಕರ ಜೊತೆಗೆ ಮುಖಾಮುಖಿ ಸಭೆ ನಡೆಸುವುದನ್ನು ಮುಂದುವರಿಸಿದ್ದಾರೆ. ಬುಧವಾರ ಹೊಸಪೇಟೆ ಶಾಸಕ ಗವಿಯಪ್ಪ ಜೊತೆ ಸುರ್ಜೇವಾಲಾ ಸಭೆ ನಡೆಸಿದ್ದು ಈ ವೇಳೆ ಅವರು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವ ನಾಗೇಂದ್ರ ವಿರುದ್ಧ ದೂರು ನೀಡಿದ್ದು ಅಗತ್ಯ ದಾಖಲೆಗಳುನ್ನು ಒದಗಿಸಿದ್ದಾರೆ. ಗವಿಯಪ್ಪ ಭೇಟಿಯ ನಂತರ ಸುರ್ಜೇವಾಲ ಇಂದು ನಾಗೇಂದ್ರಗೆ ಮತ್ತೆ ಬುಲಾವ್ ನೀಡಿದ್ದು 15 ನಿಮಿಷ ಕಾಲ ನಾಗೇಂದ್ರ ಜೊತೆ ಮಾತುಕತೆ ನಡೆಸಿದರು.
ಕೇಂದ್ರ ಸರ್ಕಾರದ 'ಕಾರ್ಮಿಕ ವಿರೋಧಿ' ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಗಳು ಇಂದು ಭಾರತ್ ಬಂದ್ ಕರೆ ನೀಡಿದ್ದವು. ಆದರೆ ಇಂದಿನ ಮುಷ್ಕರ ಕರ್ನಾಟಕದಲ್ಲಿ ಸಾಮಾನ್ಯ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಇಂದು ಸಾರಿಗೆ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಿದವು. ಪ್ರಯಾಣಿಕರಿಗೆ ಆಟೋ ಮತ್ತು ಕ್ಯಾಬ್ ಸೌಲಭ್ಯಗಳು ಸಹ ಲಭ್ಯವಿತ್ತು. ಅಲ್ಲದೆ ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು. ಆದರೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಕಾರ್ಮಿಕ ವಿರೋಧಿ ನೀತಿಗಳು ಮತ್ತು ನೌಕರರ ಕೆಲಸದ ಸಮಯವನ್ನು ಹೆಚ್ಚಿಸುವ ಪ್ರಸ್ತಾಪವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದ ಸ್ನೇಹಿತೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾಳೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಿಕೊಂಡು ಗಾಳ ಹಾಕುತ್ತಿದ್ದ ಸವಿತಾ ಎನ್ನುವ ಮಹಿಳೆಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಪಾರ್ಟಿಯಲ್ಲಿ ನೆಪದಲ್ಲಿ ಶ್ರೀಮಂತ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಸವಿತಾ, ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.
Advertisement