
ವಿಜಯಪುರ: ವಿಜಯಪುರ ಜಿಲ್ಲೆಯ ಕೆನರಾ ಬ್ಯಾಂಕಿನ ಮನಗೂಳಿ ಶಾಖೆಯಲ್ಲಿ 53.26 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕಳೆದ ತಿಂಗಳು ವಶಕ್ಕೆ ಪಡೆದಿದ್ದ ಮಾಜಿ ಶಾಖಾ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ ಸೇರಿದಂತೆ ಮೂವರು ಆರೋಪಿಗಳ ವಿಚಾರಣೆಯ ನಂತರ ಈಗ ಮತ್ತೆ 12 ಆರೋಪಿಗಳನ್ನು ಬಂಧಿಸಲಾಗಿದೆ.
ಇದರೊಂದಿಗೆ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಪೊಲೀಸರು ಇಲ್ಲಿಯವರೆಗೆ 39.26 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 39 ಕೆಜಿ ಕರಗಿದ ಚಿನ್ನ 1.16 ಕೋಟಿ ರೂ. ನಗದು ಮತ್ತು ಐದು ಕಾರುಗಳು ಸೇರಿವೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಕಳೆದ ಮೇ 25 ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನಲ್ಲಿರುವ ಕೆನರಾ ಬ್ಯಾಂಕಿನ ಮನಗೂಳಿ ಶಾಖೆಯಲ್ಲಿ ದರೋಡೆ ನಡೆದಿದ್ದು, ಇಲ್ಲಿ ಮಿರಿಯಾಲ ಈ ಹಿಂದೆ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.
ಬ್ಯಾಂಕ್ ಲಾಕರ್‌ನಿಂದ 53.26 ಕೋಟಿ ರೂ. ಮೌಲ್ಯದ 58.97 ಕೆಜಿ ಚಿನ್ನಾಭರಣ ಮತ್ತು 5.2 ಲಕ್ಷ ರೂ. ನಗದು ಕಳವು ಮಾಡಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ತಿಳಿಸಿದ್ದಾರೆ.
Advertisement