
ಚಿಕ್ಕಬಳ್ಳಾಪುರ: ಅಘೋಷಿತ ವಿದೇಶಿ ಆಸ್ತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಡೆದಿದ್ದ ಎನ್ನಲಾದ ED ದಾಳಿ ಹಿಂದೆ ವಿಪಕ್ಷಗಳ ಕೈವಾಡವಿದೆ ಎಂದು ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಶುಕ್ರವಾರ ಆರೋಪಿಸಿದರು.ಗುರುವಾರ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ಸೆಕ್ಷನ್ 37 ರ ಅಡಿಯಲ್ಲಿ ಬಾಗೇಪಲ್ಲಿ ಶಾಸಕರ ನಿವಾಸ ಸೇರಿದಂತೆ ಬೆಂಗಳೂರಿನ ಐದು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು
ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ವಿದೇಶದಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ಜುಲೈ 14 ರಂದು ವಿಚಾರಣೆಗಾಗಿ ಇಡಿ ಅಧಿಕಾರಿಗಳು ಕರೆದಿರುವುದಾಗಿ ತಿಳಿಸಿದರು.
ವಿದೇಶಿ ಬ್ಯಾಂಕ್ ಠೇವಣಿ, ವಾಹನಗಳಲ್ಲಿನ ಹೂಡಿಕೆ ಮತ್ತು ಮಲೇಷ್ಯಾ, ಹಾಂಕಾಂಗ್, ಜರ್ಮನಿ ಮತ್ತಿತರ ದೇಶಗಳಲ್ಲಿ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಸ್ಥಿರ ಆಸ್ತಿಗಳ ತನಿಖೆಗೆ ಸಂಬಂಧಿಸಿದಂತೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ವೇಳೆ ಇಡಿ ಅಧಿಕಾರಿಗಳು ವಿದೇಶದಲ್ಲಿ ನಿರ್ದಿಷ್ಟವಾಗಿ ಮಲೇಷ್ಯಾದಲ್ಲಿ ಯಾವುದೇ ಆಸ್ತಿ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ವಿದೇಶದಲ್ಲಿ ಒಂದು ಪೈಸೆಯಾದರೂ ಹೂಡಿಕೆ ಮಾಡಿದ್ದರೆ ನನ್ನ ಸಂಪೂರ್ಣ ಆಸ್ತಿಯನ್ನು ನಿಮ್ಮ ಸರ್ಕಾರಕ್ಕೆ ದಾನ ಮಾಡುತ್ತೇನೆ. ಅದನ್ನು ಅಫಿಡವಿಟ್‌ನಲ್ಲಿ ನೀಡುತ್ತೇನೆ ಎಂದು ಇಡಿ ಅಧಿಕಾರಿಗಳಿಗೆ ಹೇಳಿದ್ದೇನೆ. ಅದನ್ನು ಅವರು ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು ಎಂದು ರೆಡ್ಡಿ ಹೇಳಿದರು.
ದಾಳಿ ವೇಳೆ ಇಡಿ ಅಧಿಕಾರಿಗಳು ತನಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲಿಲ್ಲ. ಜುಲೈ 14 ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಹೇಳಿದ್ದೇನೆ ಎಂದು ತಿಳಿಸಿದ ರೆಡ್ಡಿ, ವಿದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಾರೆ ಎಂದು ತೋರಿಸುವ ನಕಲಿ ದಾಖಲೆಯನ್ನು ವೀರಸ್ವಾಮಿ ರಂಗಸ್ವಾಮಿ ಅವರು ಸೃಷ್ಟಿಸಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ಕೆಲದಿನಗಳ ಹಿಂದೆ ಸ್ನೇಹಿತರಿಂದ ಸಂದೇಶ ಬಂದಿತು. ತನ್ನ ವಿರುದ್ಧ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಸೆಲ್‌ಗೆ ದೂರು ನೀಡಲು ಬಯಸಿದ್ದೆ. ಆದರೆ ಪ್ರಕರಣದಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿ ಭಾಗಿಯಾಗಿಲ್ಲದ ಕಾರಣ ಅವರು ನನ್ನನ್ನು ವಾಪಸ್ ಕಳುಹಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಶುದ್ಧವಾಗಿದ್ದು, ಸರ್ಕಾರಕ್ಕೆ ಯಾವುದೇ ವಂಚನೆ ಮಾಡಿಲ್ಲ ಎಂದರು.
ನಾನು ಎಂದಿಗೂ ಸರ್ಕಾರಕ್ಕೆ ನಕಲಿ ಪ್ರಮಾಣಪತ್ರಗಳನ್ನು ನೀಡಿಲ್ಲ. ವಿಪಕ್ಷ ನಾಯಕರ ಷಡ್ಯಂತ್ರ ಹೊರತುಪಡಿಸಿದರೇ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.
Advertisement