
ಯಾದಗಿರಿ: ಜಮೀನಿಗೆ ಹೋಗುವ ದಾರಿಯ ವಿಚಾರವಾಗಿ ದಲಿತ ಸಮುದಾಯದವರು ಜಾತಿ ನಿಂದನೆ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ವಡಿಗೆರಾ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಚಾರ ತಿಳಿದು ಯುವಕನ ತಂದೆ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೆಹಬೂಬ್ (21) ಹಾಗೂ ಹೃದಯಾಘಾತದಿಂದ ಮೃತಪಟ್ಟವರನ್ನು ಸೈಯದ್ (50) ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದ ಹಿಂದೆ, ವಡಗೇರದಲ್ಲಿ ಜಮೀನಿನ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬವೊಂದರ ಜೊತೆ ಜಗಳ ಉಂಟಾಗಿತ್ತು. ಈ ಜಗಳವು ಮೆಹಬೂಬ್ ಮತ್ತು ಆ ಕುಟುಂಬದ ನಡುವೆ ಜಮೀನಿನ ಮೂಲಕ ಹಾದುಹೋಗುವ ವಿಷಯಕ್ಕೆ ಸಂಬಂಧಿಸಿತ್ತು.
ಈ ಕುರಿತು ಗ್ರಾಮದ ಮುಖಂಡರು ನ್ಯಾಯ ಪಂಚಾಯತ್ ಮಾಡಿ ಬಗೆಹರಿಸಿದ್ದರು. ಆದರೆ, ಮತ್ತೆ ಅದೇ ವಿಚಾರವಾಗಿ ಜಾತಿ ನಿಂದನೆ ಕೇಸ್ ಮಾಡುತ್ತೇವೆ ಎಂದು ದಲಿತ ಸಮುದಾಯದವರು ಹೆದರಿಸಿದ್ದಾರೆ. ಕೇಸ್ ದಾಖಲಾದರೆ ಮನೆ ಮಾನ-ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಬುಧವಾರ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement