CT Ravi
ಸಿ ಟಿ ರವಿ

ರಾಜ್ಯ ಸರ್ಕಾರ ಭಯೋತ್ಪಾದನೆ ನಿಗ್ರಹದ ಬಗ್ಗೆ ಗಂಭೀರವಾಗಿಲ್ಲ; ಕೋಮಾ ಸ್ಥಿತಿಯಲ್ಲಿ ಬೇಹುಗಾರಿಕಾ ದಳ: CT ರವಿ

ಒಳ್ಳೆಯ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುತ್ತಿಲ್ಲ. ಗ್ಯಾಂಗ್ ರೇಪ್, ಕಾಲ್ತುಳಿತ, ಆತ್ಮಹತ್ಯೆ, ಕೊಲೆಯಂಥ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುವುದು ಒಳ್ಳೆಯ ಸಂಗತಿಯಲ್ಲ.
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆಯನ್ನು ಎದುರಿಸುವ ಬಗ್ಗೆ ಗಂಭೀರವಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಗುರುವಾರ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧನಗಳನ್ನು ಮಾಡುವವರೆಗೂ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕ ಕೃತ್ಯಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತಿದೆಯೇ ಎಂದು ರಾಜ್ಯ ಗುಪ್ತಚರ ವಿಭಾಗಕ್ಕೆ ತಿಳಿದಿರಲಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಬೇಹುಗಾರಿಕಾ ದಳ ಕೋಮಾ ಸ್ಥಿತಿಗೆ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ. ಒಳ್ಳೆಯ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುತ್ತಿಲ್ಲ. ಗ್ಯಾಂಗ್ ರೇಪ್, ಕಾಲ್ತುಳಿತ, ಆತ್ಮಹತ್ಯೆ, ಕೊಲೆಯಂಥ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುವುದು ಒಳ್ಳೆಯ ಸಂಗತಿಯಲ್ಲ. ಈ ಸರಕಾರ, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ನಡೆಸಲು ಆಗದೆ ಇದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.

3 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣ ಆಗಿದೆ. ಇದೇನು ಒಳ್ಳೆಯ ಸುದ್ದಿಯೇ? ಭ್ರಷ್ಟಾಚಾರ, ಬೆಲೆ ಏರಿಕೆ, ಅತ್ಯಾಚಾರ, ಹತ್ಯೆ, ಉಗ್ರ ಚಟುವಟಿಕೆಗೆ ರಾಜ್ಯ ಸರಕಾರ ಸುದ್ದಿ ಆಗುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

CT Ravi
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ: ಗೃಹ ಸಚಿವ ಜಿ ಪರಮೇಶ್ವರ

ಎರಡು ದಿನಗಳ ಹಿಂದೆ ಮಂಗಳವಾರ ಎನ್‍ಐಎ ರಾಜ್ಯದ ಎರಡು ಕಡೆಗಳಲ್ಲಿ ದಾಳಿ ಮಾಡಿದೆ. ಜೀವಾವಧಿ ಶಿಕ್ಷೆಗೆ ಒಳಗಾದ ಮೂವರನ್ನು ಬಂಧಿಸಿದೆ. ಅದರಲ್ಲಿ ಮನೋವೈದ್ಯ ಡಾ. ನಾಗರಾಜ್, ಎಎಸ್‍ಐ ಚಾಂದ್ ಭಾಷಾ, ಮತ್ತೊಬ್ಬರು ಪರಾರಿಯಾದ ಶಂಕಿತ ಉಗ್ರ ಜುನೈದ್ ಅಹ್ಮದ್‍ನ ತಾಯಿ ಅನೀಸ್ ಫಾತಿಮಾ ಬಂಧಿತರು. ಎನ್‍ಐಎಗೆ ರಾಜ್ಯದ ಮಾಹಿತಿ ಸಿಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ. ರಾಷ್ಟ್ರವಿರೋಧಿ, ರಾಷ್ಟ್ರಘಾತುಕ ವ್ಯವಸ್ಥೆ ತಯಾರಾದ ಮಾಹಿತಿ ಎನ್‍ಐಎಗೆ ಸಿಗುತ್ತದೆ. ನಮ್ಮ ಬೇಹುಗಾರಿಕಾ ದಳಕ್ಕೆ (ಇಂಟೆಲಿಜೆನ್ಸ್) ಯಾಕೆ ಈ ಮಾಹಿತಿ ಸಿಗುತ್ತಿಲ್ಲ? ಎಂದು ಕೇಳಿದರು.

ನಮ್ಮ ಬೇಹುಗಾರಿಕಾ ದಳಕ್ಕೆ ಜನರು ಸೇರುವುದೂ ಗೊತ್ತಾಗುವುದಿಲ್ಲ; ಜನರು ಸಾಯುವುದೂ ಅವರ ಗಮನಕ್ಕೆ ಬರುವುದಿಲ್ಲ ಎಂಬುದು ದುರ್ದೈವದ ಸಂಗತಿ ಎಂದು ಸಿ.ಟಿ. ರವಿ ಅವರು ತಿಳಿಸಿದರು. ಜೈಲನ್ನೇ ಒಂಥರ ಸೂಪರ್ ಮಾರ್ಕೆಟ್ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ಎಲ್ಲವೂ ಸಿಗುತ್ತಿದೆ ಎಂಬುದು ರಕ್ಷಣಾ ಕ್ಷೇತ್ರದ ವೈಫಲ್ಯಕ್ಕೆ ನಿದರ್ಶನ. ರನ್ಯಾ ರಾವ್ ಪ್ರಕರಣದ ಬಳಿಕ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ಮಾಡುವವರನ್ನು ಕಡ್ಡಾಯ ತಪಾಸಣೆ ಮಾಡಬೇಕು ಎಂಬುದು ಗೊತ್ತಿದ್ದು ಕೂಡ, ಆ ವೈದ್ಯ ಡಾ. ನಾಗರಾಜ್‍ರನ್ನು ಯಾಕೆ ನಿರಂತರ ತಪಾಸಣೆ ಮಾಡುತ್ತಿರಲಿಲ್ಲ ಎಂದು ಪ್ರಶ್ನೆ ಮಾಡಿದರು.

ಬಂಧಿತರಲ್ಲದೆ ಇನ್ನೂ ಕೆಲವು ಜೈಲು ಸಿಬ್ಬಂದಿಗಳು ಈ ಥರದ ಚಟುವಟಿಕೆಗಳಲ್ಲಿ ಭಾಗವಹಿಸಿದ ಸಾಧ್ಯತೆ ಇದೆ. ಸಮಾಜಘಾತುಕರು ಹೊರಗೆ ಕೇಂದ್ರ ಸ್ಥಾನ ಇಟ್ಟುಕೊಂಡ ಹಲವು ಪ್ರಕರಣ ಅನುಭವಕ್ಕೆ ಬಂದಿತ್ತು. ಆದರೆ, ಜೈಲನ್ನೇ ಕೇಂದ್ರವಾಗಿ ಇಟ್ಟುಕೊಂಡು ಸಮಾಜಘಾತುಕ ಚಟುವಟಿಕೆ ಮಾಡುವುದು, ಜೈಲಿನ ಮೂಲಕವೇ ಸಂಚು ರೂಪಿಸುವುದು, ಜೈಲಿನ ಮೂಲಕವೇ ನಿರ್ದೇಶನ ಕೊಡುವುದು, ಅಲ್ಲಿಂದಲೇ ನಿಯಂತ್ರಣ ಮಾಡುವುದು ಜೈಲಿನ ಅಧಿಕಾರಿಗಳು, ಇಂಟೆಲಿಜೆನ್ಸ್ ಅಧಿಕಾರಿಗಳಿಗೆ ಗೊತ್ತಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಅನಿಸುತ್ತದೆ ಎಂದು ನುಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com