
ಚಿಕ್ಕಮಗಳೂರು: ನೂತನ ಚಿಕ್ಕಮಗಳೂರು- ತಿರುಪತಿ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ಹಾಗು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಇಂದು ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿ. ಸೋಮಣ್ಣ, ಧಾನಿ ನರೇಂದ್ರ ಮೋದಿ ಅವರು 3 ನೇ ಭಾರಿಗೆ ದೇಶದ ಪ್ರಧಾನಿಗಳಾದ ನಂತರ ರೈಲ್ವೆ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಕೆಲಸ ಮಾಡಿದ್ದಾರೆ. ಅದರ ಭಾಗವಾಗಿ ಹಲವು ದಶಕದ ಕನಸಾಗಿದ ಚಿಕ್ಕಮಗಳೂರು -ತಿರುಪತಿ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ತಿರುಪತಿ- ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ದತ್ತಾತ್ರೇಯ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡುವ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಾಗೆಯೇ ಚಿಕ್ಕಮಗಳೂರು- ಬೇಲೂರು- ಹಾಸನ ರೈಲು ಮಾರ್ಗಕ್ಕೆ ಹಳಿ ಹಾಕುವ ಕಾರ್ಯ ಹಾಗು ಭೂ ಸ್ವಾಧೀನ ಕಾರ್ಯಗಳು ನಡೆಯುತಿದ್ದು, ಇನ್ನು ಎರಡೂವರೆ ವರ್ಷದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಶಿವಮೊಗ್ಗ- ಶೃಂಗೇರಿ -ಮಂಗಳೂರು ನೂತನ ರೈಲು ಮಾರ್ಗಕ್ಕೆ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಎಲ್.ಸಿ ರೈಲು ಗೇಟ್ ಬಂದ್ ಮಾಡಿ ಅಲ್ಲಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೆ 644 ಗೇಟ್‌ಗಳ ಕಾರ್ಯ ಪೂರ್ಣಗೊಳಿಸಲಾಗಿದೆ. ಕರ್ನಾಟಕದಲ್ಲಿ 1,981 ಕೋಟಿ ರೂ. ವೆಚ್ಚ ಮಾಡಿದ್ದು, 61 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು.
Advertisement