
ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೊಂದಣಿಗಾಗಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಆಧಾರಿತ ತಂತ್ರಜ್ಞಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಉದ್ಘಾಟನೆ ಮಾಡಿದರು.
ವಿಶೇಷ ಡಿಜಿಲಾಕರ್ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ತಂತ್ರಜ್ಞಾನ ಆಧಾರ್ ಆಧಾರಿತ ಡಿಜಿಲಾಕರ್, ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣಪತ್ರಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ವ್ಯವಸ್ಥೆಯನ್ನು ಯುಐಡಿಎಐ, ಸಿ-ಇಜಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್) ಮತ್ತು ಕರ್ನಾಟಕ ರಾಜ್ಯ ನರ್ಸಿಂಗ್ ಪರೀಕ್ಷಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಈ ತಂತ್ರಜ್ಞಾನದ ನೆರವಿನಿಂದ ಆಧಾರ್ ಇ-ಕೆವೈಸಿ (E-Kyc)ಯಿಂದ ಶುಶ್ರೂಷಕರ ವೈಯಕ್ತಿಕ ಡಾಟಾ, ವಿಳಾಸ, ಫೋಟೋ, ಹಾಗೂ ಇತರೆ ಮಾಹಿತಿಗಳನ್ನು ಆಧಾರ್ ಸರ್ವರ್ ನಿಂದ ನೇರವಾಗಿ ಕರ್ನಾಟಕ ಶುಶ್ರೂಷ ಪರಿಷತ್ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿನ ಬೆಂಗಳೂರಿನ ಕೇಂದ್ರ ಕಚೇರಿಗೆ ಬರಬೇಕಾಗಿತ್ತು.
Advertisement