ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ: ಡಿಸಿಎಂ ಡಿ.ಕೆ ಶಿವಕುಮಾರ್

“ನಮ್ಮ ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಹಣ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
DCM DK Shivakumar
ಡಿಸಿಎಂ ಡಿಕೆ ಶಿವಕುಮಾರ್online desk
Updated on

ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ ಮಾಡಿ, ಶೀಘ್ರ ಚುನಾವಣೆ ನಡೆಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಜಿಬಿಎ ರಚನೆ ಮಾಡಲಾಗಿದೆ ಈ ಮೂಲಕ ಐದು ಪಾಲಿಕೆಗಳನ್ನು ನಾವು ಮಾಡಿಯೇ ತೀರುತ್ತೇವೆ. ಈ ಕುರಿತು ಶಾಸಕ ರಿಜ್ವಾನ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ಮಾನ ನೀಡಲೇಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಏಕೆಂದರೆ ಡಿ.ಕೆ.ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಇಲ್ಲಿ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು ಆದರೆ ಸರ್ಕಾರದ ರಾಯಭಾರಿಗಳು ನೀವು. ನಮ್ಮ ಭವಿಷ್ಯ, ಬೆಂಗಳೂರು ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದರು.

ಜನರ ಕಲ್ಯಾಣಕ್ಕಾಗಿ 25% ಹಣ ವಿನಿಯೋಗ

“ನಮ್ಮ ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಹಣ ನೀಡಿದೆ. 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚವಾದರೆ, 19 ಸಾವಿರ ಕೋಟಿ ಹಣವನ್ನು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಸುಮಾರು 11 ಸಾವಿರ ಕೋಟಿಯನ್ನು ಪಿಂಚಣಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಬಜೆಟ್ಟಿನ 25% ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಈ ಉಪಕಾರ ಸ್ಮರಣೆಯನ್ನು ಜನರಿಗೆ ಮನದಟ್ಟು ಮಾಡಬೇಕಿರುವುದು ನಿಮ್ಮ ಕರ್ತವ್ಯ” ಎಂದರು.

“ಈ ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಯಾರೂ ಸಹ ನಿಲ್ಲಸಲು ಸಾಧ್ಯವಿಲ್ಲ. ಉಳುವವನೆ ಭೂಮಿಯ ಒಡೆಯ, ಅಂಗನವಾಡಿ, ಆಶಾ, ನರೇಗಾ ಹೀಗೆ ನೂರಾರು ಕಾರ್ಯಕ್ರಮಗಳು ಕಾಂಗ್ರೆಸ್ ಜನರಿಗೆ ನೀಡಿರುವ ಶಕ್ತಿ. ಅರಣ್ಯ ಭೂಮಿ ಹಕ್ಕು, ಆಹಾರ ಭದ್ರತಾ ಕಾಯ್ದೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಸಾಧ್ಯವಾಯಿತೇ? ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪ ಅವರು. ನಾವು ಯಾವುದೇ ರಾಜಕೀಯ ದೃಷ್ಟಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿಲ್ಲ. ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದ ಬ್ಯಾಂಕ್ ಗಳೇ ಮನೆ ಬಾಗಿಲಿಗೆ ಬಂದಿವೆ. ಬಿಸಿಯೂಟ, ಅನ್ನಭಾಗ್ಯ ಇದೆಲ್ಲವೂ ಕ್ರಾಂತಿಕಾರಕ ಯೋಜನೆಗಳು. ಹಟ್ಟಿ, ತಾಂಡಾಗಳಲ್ಲಿ ವಾಸವಿರುವ ಜನರು ಯಾವುದೇ ಭೂ ದಾಖಲೆಗಳನ್ನು ಹೊಂದಿರಲಿಲ್ಲ. ಅವರಿಗೆಲ್ಲ ಉಚಿತವಾಗಿ ಭೂ ದಾಖಲೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ 1,11,111 ದಾಖಲೆಗಳನ್ನು ನೀಡಲಾಯಿತು” ಎಂದರು.

“ದೇಶದ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ನಮ್ಮ ಸರ್ಕಾರ ಪ್ರಾರಂಭ ಮಾಡಿದೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡಿದರೆ ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ರಣದೀಪ್ ಸುರ್ಜೇವಾಲಾ ಅವರಿಗೆ ನಾವು ಮೊದಲು ಧನ್ಯವಾದಗಳನ್ನು ತಿಳಿಸಬೇಕು. ಏಕೆಂದರೆ ಗ್ಯಾರಂಟಿ ಸಮಿತಿಗಳನ್ನು ರಚನೆ ಮಾಡಿ ಕಾರ್ಯಕರ್ತರು ಸರ್ಕಾರದ ಈ ಯೋಜನೆಯ ಭಾಗವಾಗಬೇಕು. ಸರ್ಕಾರ ಮುಖವಾಣಿಯಾಗಿ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದ ಕಾರಣಕ್ಕೆ ನೀವು ಅತ್ಯತ್ತಮ ಸ್ಥಾನದಲ್ಲಿ ಕುಳಿತಿದ್ದೀರಿ” ಎಂದು ಹೇಳಿದರು.

“ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯವರಿಗೆ ನಿಮ್ಮ ಬೆಲೆ ಏನು ಎಂಬುದು ಅರ್ಥವಾಗಿಲ್ಲ. ನೀವು ಸರ್ಕಾರದ ಪ್ರತಿನಿಧಿಗಳು. ಕರ್ನಾಟಕದ, ಸರ್ಕಾರದ ದನಿ. ನಿಮಗೆ ಸರ್ಕಾರದ ಚಿಹ್ನೆ ನೀಡಲಾಗಿದೆ, ಅಧ್ಯಕ್ಷರುಗಳಿಗೆ ಕಚೇರಿ ನೀಡಲಾಗಿದೆ. ವಿಪಕ್ಷಗಳು ಸದನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿರುದ್ದ ಕೋಲಾಹಲ ಎಬ್ಬಿಸಿದರು. ಶಾಸಕರ ಕಾರ್ಯಪ್ರಗತಿ ಮಾಡಲು ನೀವುಗಳು ಯಾರು ಎಂದು ಪ್ರಶ್ನೆ ಮಾಡಿದರು. ಇವರುಗಳನ್ನು ನಮ್ಮ ಕೆಳಗೆ ಉಪಾಧ್ಯಕ್ಷರನ್ನಾಗಿ ಮಾಡಿ ಎಂದರು. ಶಾಸಕರ ಸ್ಥಾನಕ್ಕೆ ಕುತ್ತು ತಂದಿದ್ದೀರಿ ಎಂದರು. ನಮ್ಮ ಪಕ್ಕ ಕುರ್ಚಿ ಹಾಕಿದ್ದೀರಿ ಎಂದೆಲ್ಲ ಹೇಳಿದರು ಅವರ ಮಾತುಗಳಿಗೆ ನಾವು ಬಗ್ಗಲಿಲ್ಲ” ಎಂದರು.

DCM DK Shivakumar
2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದು ಸರ್ಕಾರದ ಸಂಕಲ್ಪ: ಡಿಕೆ ಶಿವಕುಮಾರ್

“ನಮ್ಮ ಕಾರ್ಯಕರ್ತರಿಗೆ ನಾವು ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಮ್ಮನ್ನು ಅಧಿಕಾರಕ್ಕೆ ತಂದ ನಿಮಗೆ ಅಧಿಕಾರ ನೀಡಿದ್ದೇವೆ. ಆಸ್ಪತ್ರೆ, ಬಗರ್ ಹುಕುಂ ಸೇರಿದಂತೆ ಅನೇಕ ಸಮಿತಿಗಳಲ್ಲಿ ನಿಮಗೆ ಅವಕಾಶ ನೀಡಿದ್ದೇವೆ. ನಾನು ಸಹಕಾರ ಮಂತ್ರಿಯಾಗಿದ್ದಾಗ, ವಿದ್ಯುತ್ಛಕ್ತಿ ಸಚಿವನಾಗಿದ್ದಾಗ ಸಮಿತಿಗಳಲ್ಲಿನ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿದ್ದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲಾ ವರ್ಗದ 15 ಜನರನ್ನು ಗುರುತಿಸಿ ನಿಮಗೆ ಅಧಿಕಾರ ನೀಡಲಾಗಿದೆ” ಎಂದು ತಿಳಿಸಿದರು.

“ನಿಮ್ಮಲ್ಲಿ ಹಲವರು ಕ್ಷೇತ್ರ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ನೋವು, ದುಃಖ ನೋಡುತ್ತಿದ್ದರೆ ನೀವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತಾಗಿದೆ. ಮುಂದೆ ಎಲ್ಲಾ ಕ್ಷೇತ್ರಗಳ ಗ್ಯಾರಂಟಿ ಸಮತಿ ಸದಸ್ಯರನ್ನು ಕರೆಸಿ ಮಾತನಾಡುತ್ತೇನೆ. ಎಲ್ಲರಿಗೂ ನಾವು ಶಕ್ತಿ, ಮಾರ್ಗದರ್ಶನ ನೀಡಬೇಕು” ಎಂದರು.

“ನಮ್ಮ ಸರ್ಕಾರ ಐದು ಗ್ಯಾರಂಟಿ ಜೊತೆಗೆ ಭೂ ಗ್ಯಾರಂಟಿ ನೀಡಿದೆ. ಈಗ ಬೆಂಗಳೂರು ನಗರದಲ್ಲಿ ಎಲ್ಲಾ ಆಸ್ತಿ ಖಾತಾ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅನೇಕ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ಯಾರ ಹೆಸರಲ್ಲಿದೆ ಎಂಬುದೇ ಗೊತ್ತಿಲ್ಲ. ಅವರ ತಾತ, ಮುತ್ತಾತನ ಹೆಸರಿನಲ್ಲಿ ಖಾತೆಗಳಿವೆ. ಇದನ್ನು ಸರಿಪಡಿಸಿ ದಾಖಲೆಗಳನ್ನು ನೀಡಲು ಮುಂದಾಗಿದೆ. ಕೃಷ್ಣಭೈರೇಗೌಡ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಮಾಡಿದ್ದು, ಅಲ್ಲಿ ಪ್ರತಿ ವಾರ್ಡ್ ನಲ್ಲಿ 20-30 ಕಾರ್ಯಕರ್ತರಂತೆ, ಇಡೀ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಸ್ಥಳೀಯರ ಮನೆಮನೆಗೆ ಹೋಗಿ, ಅರ್ಜಿ ಕೊಟ್ಟು ಅದನ್ನು ತುಂಬಿಸಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com