News headlines 15-07-2025 | ಸರ್ಕಾರಿ ಗೌರವಗಳೊಂದಿಗೆ ಬಿ ಸರೋಜಾ ದೇವಿ ಅಂತ್ಯಕ್ರಿಯೆ; ಆ.1 ರಿಂದ ಆಟೋ ಪ್ರಯಾಣ ದರ ಏರಿಕೆ; ದೇವನಹಳ್ಳಿ: ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಸರ್ಕಾರ

News headlines 15-07-2025 | ಸರ್ಕಾರಿ ಗೌರವಗಳೊಂದಿಗೆ ಬಿ ಸರೋಜಾ ದೇವಿ ಅಂತ್ಯಕ್ರಿಯೆ; ಆ.1 ರಿಂದ ಆಟೋ ಪ್ರಯಾಣ ದರ ಏರಿಕೆ; ದೇವನಹಳ್ಳಿ: ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಸರ್ಕಾರ

1. Devanahalli: ರೈತರ ಜಮೀನು ಸ್ವಾಧೀನ ಕೈಬಿಡಲು ನಿರ್ಧಾರ- CM, MB Patil, Prakash Raj

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು ಮೂರು ವರ್ಷದಿಂದ ಹೋರಾಟ ನಡೆಸುತ್ತಿದ್ದರು. ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನರಾಯಪಟ್ಟಣ ಸುತ್ತಮುತ್ತಲಿನ 13 ಗ್ರಾಮಗಳ ಭೂ ಸ್ವಾಧೀನಕ್ಕೆ ಕೆಐಎಡಿಬಿಗೆ ಭೂಮಿ ನೀಡಲು ರೈತರು, ಸಂಘಟನೆಗಳು ಒಪ್ಪುತ್ತಿಲ್ಲ. ರಾಜ್ಯ ಸರ್ಕಾರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

2. ಸರ್ಕಾರಿ ಗೌರವಗಳೊಂದಿಗೆ B SarojaDevi ಅಂತ್ಯಕ್ರಿಯೆ, ಮಲ್ಲೇಶ್ವರದ 11ನೇ ಕ್ರಾಸ್ ಗೆ ನಟಿಯ ಹೆಸರು

ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆ ಇಂದು ಚನ್ನಪಟ್ಟಣದ ದಶವಾರದಲ್ಲಿರುವ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಸರೋಜಾದೇವಿ ಅವರ ಪುತ್ರ ಗೌತಮ್ ಅವರು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು. ಇದಕ್ಕೂ ಮುನ್ನ ಪೊಲೀಸರು ಕುಶಾಲ ತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಅಂತ್ಯಸಂಸ್ಕಾರಕ್ಕೂ ಮುನ್ನ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಮೆರವಣಿಗೆ ಮೂಲಕ ತರಲಾಯಿತು. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರೋಜಾ ದೇವಿಯವರ ಅಂತಿಮ ದರ್ಶನ ಪಡೆದು, ಸರೋಜಾ ದೇವಿಯವರ ನಿಧನ ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. ಅವರ ನಿವಾಸವಿರುವ ಮಲ್ಲೇಶ್ವರದ 11ನೇ ಕ್ರಾಸಿಗೆ ಸರೋಜಾ ದೇವಿ ಹೆಸರಿಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.

3. ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 35 IPS ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಮಹತ್ವದ ಬದಲಾವಣೆಗಳಾಗಿವೆ. ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಡಿಸಿಪಿ ಜಿತೇಂದ್ರ ಕುಮಾರ್ ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

4. ಆಟೋ ಪ್ರಯಾಣ ದರ ಹೆಚ್ಚಳ; ಆಗಸ್ಟ್ 1 ರಿಂದ ಜಾರಿ!

ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡಲಾಗಿದ್ದು, ಹೊಸ ದರ ಆಗಸ್ಟ್ 1ರಿಂದ ಅನ್ವಯವಾಗಲಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶದ ಪ್ರಕಾರ, ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15ರು.ನಿಂದ 18ರು.ಗೆ ಏರಿಸಲಾಗಿದೆ. ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು. ಹಾಗೆಯೇ, ಅಕ್ಟೋಬರ್ 10ರೊಳಗೆ ಮೀಟರ್‌ನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

5. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಉಪನ್ಯಾಸರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಬಂಧನಕ್ಕೊಳಗಾಗಿದ್ದಾರೆ. ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜತೆ ಸಲುಗೆ ಬೆಳೆಸಿಕೊಂಡಿದ್ದ. ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತಹಳ್ಳಿಯ ಗೆಳೆಯನ ರೂಮ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಳಿಕ ಉಪನ್ಯಾಸಕ ಸಂದೀಪ್ ಹಾಗೂ ಉಪನ್ಯಾಸಕನ ಸ್ನೇಹಿತ ಸಹ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಉಪನ್ಯಾಸಕರಿಂದ ಬೆದರಿಕೆ ಹೆಚ್ಚಾದಾಗ ಸಂಕಷ್ಟ ತಾಳಲಾರದೆ ವಿದ್ಯಾರ್ಥಿನಿ ಪೊಷಕರ ಬಳಿ ನಡೆದದ್ದನ್ನು ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

6. GBA ಅಡಿಯಲ್ಲಿ 5 ಪಾಲಿಕೆ ರಚನೆ, ಶೀಘ್ರವೇ ಚುನಾವಣೆ: DK Shivakumar

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ಪಾಲಿಕೆ ರಚನೆ ಮಾಡಿ, ಶೀಘ್ರ ಚುನಾವಣೆ ನಡೆಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಮಾತನಾಡಿದ ಅವರು, ಜಿಬಿಎ ರಚನೆ ಮಾಡಲಾಗಿದೆ. ಈ ಮೂಲಕ ಐದು ಪಾಲಿಕೆಗಳನ್ನು ನಾವು ಮಾಡಿಯೇ ತೀರುತ್ತೇವೆ. ಈ ಕುರಿತು ಶಾಸಕ ರಿಜ್ವಾನ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com