ವಿಜಯಪುರ ಭಾಗಕ್ಕೆ 3200 ಕೋಟಿ ರೂ ಮೊತ್ತದ ನೀರಾವರಿ ಯೋಜನೆ; ಅಭಿವೃದ್ಧಿ ಕಾರ್ಯ ವಿರೋಧ ಪಕ್ಷಗಳ ಕಣ್ಣಿಗೆ ಕಾಣುತ್ತಿಲ್ಲವೇ?: ಡಿಕೆಶಿ

ನಿಮ್ಮ ಶಾಸಕರು ನನಗೆ ಏನೂ ಬೇಡ, ನಮ್ಮ ಭಾಗದ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರಿಗೆ ಇಲಾಖೆಯಲ್ಲಿ 5,700 ಹುದ್ದೆ, ಪರಿಶಿಷ್ಟರಿಗೆ ವಿಶೇಷ ಯೋಜನೆ ನೀಡಿ 2 ಕೋಟಿ ಮೊತ್ತದವರೆಗೂ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ.
Siddatramaiah Dk shivakumar and MB patil
ವಿಜಯಪುರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್
Updated on

ವಿಜಯಪುರ: ವಿಜಯಪುರ ಹಾಗೂ ಈ ಭಾಗದ 93 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ರೂ.3200 ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಂಡಿ ತಾಲೂಕಿನಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ನಿಮ್ಮ ಶಾಸಕರು ನನಗೆ ಏನೂ ಬೇಡ, ನಮ್ಮ ಭಾಗದ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಹೊರ್ತಿ- ರೇವಣ್ಣ ಸಿದ್ದೇಶ್ವರ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ ಹಾಗೂ ಇಂಡಿ ತಾಲೂಕಿನ 90 ಕೆರೆಗಳನ್ನು ಭರ್ತಿಗೊಳಿಸುವ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಂದ ಒಟ್ಟಾರೆ 4,555 ಕೋಟಿ ಮೊತ್ತದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ಹಮ್ಮಿಕೊಂಡಿದ್ದೇವೆ ಎಂದರು.

ಸರ್ಕಾರದಲ್ಲಿ ಹಣವಿಲ್ಲ, ಎಲ್ಲಾ ಹಣ ಗ್ಯಾರಂಟಿ ಯೋಜನೆಗಳಿಗೆ ಹೋಗಿವೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಇಂದು ಸಾರಿಗೆ ಇಲಾಖೆ ಮೂಲಕ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಇಂದಿನವರೆಗೆ ಒಟ್ಟು 500 ಕೋಟಿ ಟ್ರಿಪ್ ಗಳನ್ನು ಪೂರೈಸಿದೆ. ಇಂದು ಮುಖ್ಯಮಂತ್ರಿಗಳು ಪ್ರಯಾಣಿಕರಿಗೆ 500ನೇ ಟಿಕೆಟ್ ನೀಡಿ ಈ ಕ್ಷಣವನ್ನು ಸಂಭ್ರಮಿಸಲಾಗಿದೆ. ಈ ಯೋಜನೆಗೆ ಇದುವರೆಗೂ 12,669 ಕೋಟಿ ವೆಚ್ಚ ಮಾಡಲಾಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆ. ಆದರೆ ಕ್ಷೇತ್ರದಲ್ಲಿ ಇಂದು 4,555 ಕೋಟಿ ಮೊತ್ತದ ಯೋಜನೆಗೆ ಶಂಕುಸ್ಥಾಪನೆ ಮಾಡಿರುವುದು ಅಭಿವೃದ್ಧಿಯ ಯೋಜನೆ” ಎಂದು ತಿಳಿಸಿದರು.

“ಬಿಜೆಪಿ ಟೀಕೆಗಳು ಸಾಯುತ್ತವೆ, ನಮ್ಮ ಯೋಜನೆಗಳು ಶಾಶ್ವತವಾಗಿ ಉಳಿಯುತ್ತವೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ ಬಹಳ ಮುಖ್ಯವಾದುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರಿಗೆ ಇಲಾಖೆಯಲ್ಲಿ 5,700 ಹುದ್ದೆ, ಪರಿಶಿಷ್ಟರಿಗೆ ವಿಶೇಷ ಯೋಜನೆ ನೀಡಿ 2 ಕೋಟಿ ಮೊತ್ತದವರೆಗೂ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುವುದಾಗಿ ಮಾತು ಕೊಟ್ಟಿತ್ತು. ಅದರಂತೆ ನಾವು ನೀಡುತ್ತಿದ್ದೇವೆ. ಆಮೂಲಕ ಈ ಭಾಗದ ಸುಮಾರು 42 ಕ್ಷೇತ್ರಗಳಿಗೆ ಸರಾಸರಿಯಲ್ಲಿ 100 ಕೋಟಿ ಅನುದಾನ ಸಿಗಲಿದೆ. ಈ ಭಾಗದಲ್ಲಿ ಅನೇಕ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.

Siddatramaiah Dk shivakumar and MB patil
ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ: ಡಿ.ಕೆ ಶಿವಕುಮಾರ್

ಬೀದರ್ ಜಿಲ್ಲೆಯಲ್ಲಿ 2025 ಕೋಟಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ, ಪಿರಿಯಾಪಟ್ಟಣದಲ್ಲಿ 500 ಕೋಟಿ ಯೋಜನೆ ಆರಂಭಿಸಲಾಗಿದೆ. ಮಹದೇವಪ್ಪ ಅವರು ಇದೇ ತಿಂಗಳು 20-21ರಂದು 3,647 ಕೋಟಿ ಮೊತ್ತದ ಕಾಮಗಾರಿ ಆರಂಭಿಸಲಿದ್ದಾರೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಕ ಯೋಜನೆ ತರುತ್ತಿದ್ದಾರೆ. ಹೆಚ್.ಕೆ. ಪಾಟೀಲ್ ಅವರ ಪ್ರವಾಸೋದ್ಯಮ ಸಚಿವರಾಗಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಅನೇಕ ಪ್ರವಾಸಿ ತಾಣ ಅಭಿವೃದ್ಧಿಗೆ ಮುಂದಾಗಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೆಲ್ಲವು ಅಭಿವೃದ್ಧಿಯಲ್ಲವೇ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕೇಳಲು ಬಯಸುತ್ತೇನೆ” ಎಂದರು.

“ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ದೊಡ್ಡ ಮಾದರಿಯಾಗಿವೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿ ಅನುಸರಿಸಲಾಗುತ್ತಿದೆ. ಜನರ ಆದಾಯ ಪಾತಾಳಕ್ಕೆ ಕುಸಿದು, ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಬಡವರನ್ನು ರಕ್ಷಿಸಲು ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ನಾವು ಈ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ನಮ್ಮ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 5 ಸಾವಿರ ರೂಪಾಯಿ ಉಳಿತಾಯವಾಗಲಿದೆ. ಇಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಹೊರತಾಗಿ ಬೇರೆ ಯಾರೂ ನೀಡಲು ಸಾಧ್ಯವಿಲ್ಲ” ಎಂದರು.

“ಅನೇಕರು ನಮ್ಮ ಸರ್ಕಾರವನ್ನು ಟೀಕೆ ಮಾಡುತ್ತಿರುತ್ತಾರೆ, ಮಾಡಲಿ. ಮರದಲ್ಲಿ ಹಣ್ಣು ಕಂಡರೆ ಕಲ್ಲು ಹೊಡೆಯಲು ಅನೇಕರು ಪ್ರಯತ್ನಿಸುತ್ತಾರೆ. ನಮ್ಮ ಪಕ್ಷ 70 ವರ್ಷ ಈ ದೇಶವನ್ನು ಆಳಿದೆ. ನಮ್ಮ ಪಕ್ಷ ನೀಡಿರುವ ಯೋಜನೆಗಳನ್ನು ಯಾರೂ ಬದಲಿಸಲು ಸಾಧ್ಯವಾಗಿಲ್ಲ. ಉಳುವವನಿಗೆ ಭೂಮಿ, ಪಂಚವಾರ್ಷಿಕ ಯೋಜನೆ, ಬಡವರಿಗೆ ನಿವೇಶನ, ಮನೆ, ಪಿಂಚಣಿ ಸೌಲಭ್ಯ, ಉದ್ಯೋಗ ಖಾತರಿ ಸೇರಿದಂತೆ ನಮ್ಮ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಆಗಲಿಲ್ಲ. ಅದೇ ರೀತಿ ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು” ಎಂದು ತಿಳಿಸಿದರು.

“ಬಳ್ಳಾರಿ, ವಿಜಯನಗರದಲ್ಲಿ ತಾಂಡಾ ಪ್ರದೇಶದ ಜನರಿಗೆ ಅವರ ಆಸ್ತಿ ಮತ್ತು ಭೂಮಿ ದಾಖಲೆಗಳನ್ನು ನಮ್ಮ ಸರ್ಕಾರ ನೀಡುವ ಮೂಲಕ 1,11,111 ಜನರಿಗೆ ಭೂ ಗ್ಯಾರಂಟಿ ನೀಡಿದೆ. ಇಂತಹ ಕೆಲಸ ಬೇರೆ ಯಾರೂ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನು ನಮ್ಮ ಸರ್ಕಾರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಚಿವ ಸಂಪುಟ ಸಭೆ ಮಾಡಿ, ಆ ಭಾಗದ ಅಭಿವೃದ್ಧಿಗಳಿಗೆ ಅನುಮೋದನೆ ನೀಡುತ್ತಿದ್ದೇವೆ. ಕಲಬುರ್ಗಿ, ಚಾಮರಾಜನಗರ, ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದೆ. ಈ ಜಿಲ್ಲೆಯ ಶಾಸಕರು ನಮ್ಮ ಜಿಲ್ಲೆಯಲ್ಲೂ ಸಚಿವ ಸಂಪುಟ ಸಭೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com