
ಬೆಂಗಳೂರು: ನಿನ್ನೆ ವಿಧಿವಶರಾದ ಹಿರಿಯ ನಟಿ ಬಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ಇಂದು ಅಪರಾಹ್ನ ಅವರ ಹುಟ್ಟೂರು ರಾಮನಗರದ ಚೆನ್ನಪಟ್ಟಣ ತಾಲ್ಲೂಕಿನ ದಶವಾರದಲ್ಲಿ ಅವರ ತಾಯಿ ಸಮಾಧಿ ಪಕ್ಕದಲ್ಲೇ ನೆರವೇರಲಿದೆ.
ಹಿಂದಿನ ರಾಮನಗರ ಇಂದಿನ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಸರೋಜಾದೇವಿಯವರ ಹುಟ್ಟೂರು, ಇಲ್ಲೇ ಅವರು ತೋಟವನ್ನು ಹೊಂದಿದ್ದಾರೆ. ಹುಟ್ಟೂರಿನ ಮೇಲೆ ಸರೋಜಾದೇವಿಯವರಿಗೆ ತುಂಬಾ ಪ್ರೀತಿಯೆಂಬ ಕಾರಣಕ್ಕೆ ಅಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಈಗಾಗಲೇ ಪಾರ್ಥಿವ ಶರೀರ ಬೆಂಗಳೂರಿನ ಮಲ್ಲೇಶ್ವರ 11ನೇ ಕ್ರಾಸಿನ ನಿವಾಸದಿಂದ ಹುಟ್ಟೂರಿನತ್ತ ಸಾಗಿದೆ. ತಮ್ಮ ದೇಹವನ್ನು ಹೂತಿಡಬೇಕೆಂದು ಹೇಳಿದ್ದರಿಂದ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರ ಪುತ್ರ ಗೌತಮ್ ತಿಳಿಸಿದ್ದಾರೆ.
ಹಿಂದೊಮ್ಮೆ ಕಾರ್ಯಕ್ರಮದಲ್ಲಿ ತಮ್ಮ ಪತಿ ಶ್ರೀಹರ್ಷ ಅವರನ್ನು ಹೂತಿದ್ದ ಸಮಾಧಿ ಪಕ್ಕದಲ್ಲೇ ತಮ್ಮ ಸಮಾಧಿ ಮಾಡಬೇಕೆಂದು ಸರೋಜಾ ದೇವಿ ಆಸೆ ವ್ಯಕ್ತಪಡಿಸಿದ್ದರು. ಆದರೆ ಈಗ ಆ ಜಾಗದಲ್ಲಿ ಅಪಾರ್ಟ್ ಮೆಂಟ್ ತಲೆಯೆತ್ತಿರುವುದರಿಂದ ಅಲ್ಲಿ ಸ್ಥಳಾವಕಾಶ ಕೊರತೆಯಿಂದ ಅವರ ಹುಟ್ಟೂರಿನ ತೋಟದ ಮನೆಯಲ್ಲಿ ಸಮಾಧಿ ಮಾಡಲಾಗುತ್ತದೆ.
ಇಂದು ಮುಖ್ಯಮಂತ್ರಿ ಭೇಟಿ: ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರೋಜಾ ದೇವಿಯವರ ಅಂತಿಮ ದರ್ಶನ ಪಡೆದು ಅವರ ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಚತುರ್ಭಾಷಾ ತಾರೆ ಸರೋಜಾ ದೇವಿಯವರ ನಿಧನ ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಗಳಿಸಿದ್ದಾರೆ. ಅವರ ನಿವಾಸವಿರುವ ಮಲ್ಲೇಶ್ವರಂ 11ನೇ ಕ್ರಾಸಿಗೆ ಸರೋಜಾ ದೇವಿ ಹೆಸರಿಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
Advertisement