ಮೈಸೂರು: ರಾಜ್ಯ ಸರ್ಕಾರಿ ನೌಕರರಿಗೆ OPS ಜಾರಿ, ಆರೋಗ್ಯ ಸಂಜೀವಿನಿ ಬಗ್ಗೆ ಸೂಕ್ತ ತೀರ್ಮಾನ- ಸಿಎಂ ಸಿದ್ದರಾಮಯ್ಯ
ಮೈಸೂರು: ರಾಜ್ಯದ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡಿದ್ದು, ಒಪಿಎಸ್ ಜಾರಿ ಮತ್ತು ಆರೋಗ್ಯ ಸಂಜೀವಿನಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಬೇಡಿಕೆಗಳ ಈಡೇರಿಕೆಗೆ ಸದಾ ತೆರೆದ ಮನಸ್ಸಿನಿಂದ ಇರುತ್ತೇನೆ. ಹಾಗೆಯೇ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನೂ ಪರಿಣಾಮಕಾರಿಯಾಗಿ ಮಾಡಬೇಕು ಎಂದರು.
ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕರೆ ಪ್ರತಿಯೊಬ್ಬರ ಪ್ರತಿಭೆ ಹೊರಗೆ ಬರತ್ತದೆ. ಮಕ್ಕಳ ಪ್ರತಿಭೆ ರೂಪುಗೊಳ್ಳಲು ಶಿಕ್ಷಕರಷ್ಟೇ ಪೋಷಕರ ಶ್ರಮ ಕೂಡ ಅಗತ್ಯ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಯಾರನ್ನೂ ದೂರಲು ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ. ಜನರ ತೆರಿಗೆ ಹಣದಲ್ಲಿ ನಾವೆಲ್ಲಾ ಬದುಕಿದ್ದೇವೆ. ಹೀಗಾಗಿ ಸಮಾಜದ, ಎಲ್ಲಾ ಜಾತಿ, ಧರ್ಮದವರ ಋಣವೂ ನಮ್ಮ ಮೇಲಿದೆ. ಈ ಋಣ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಶಿಕ್ಷಕರು, ಸೈನಿಕರು, ರೈತರು ನಮ್ಮ ಬದುಕನ್ನು ಹಸನು ಮಾಡಿದ್ದಾರೆ. ಈ ಮೂವರ ಋಣ ತೀರಿಸುವ ಕೆಲಸ ನಾವು ಮಾಡಬೇಕಿದೆ. ಶಿಕ್ಷಕರಾದವರು ಮಕ್ಕಳಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜಮುಖಿ ಪ್ರಜೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ