
ಬೆಂಗಳೂರು: ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲ ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಶನಿವಾರ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರಿನ ಭಾರತಿ ನಗರದಲ್ಲಿ ಮಂಗಳವಾರ ರಾತ್ರಿ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವು(40) ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಇಂದು ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು. ವಿವರವಾದ ವಿಚಾರಣೆ ನಡೆಯುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಪೊಲೀಸ್ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಬಸವರಾಜ್, "ವಿಚಾರಣೆಗೆ ನನ್ನನ್ನು ಕರೆಯಲಾಗಿತ್ತು. ನಾನು ಸಹಕರಿಸಿದ್ದೇನೆ. ಪೊಲೀಸರು ಮತ್ತೆ ಕರೆಯುವುದಾಗಿ ಹೇಳಿದ್ದಾರೆ. ಕರೆ ಮಾಡಿದಾಗ ನಾನು ಮತ್ತೆ ಬಂದು ವಿಚಾರಣೆಗೆ ಸಹಕರಿಸುತ್ತೇನೆ" ಎಂದು ತಿಳಿಸಿದರು.
ವಿಚಾರಣೆಯ ವಿಷಯಗಳನ್ನು ನಾನು ಹೇಳಲು ಸಾಧ್ಯವಿಲ್ಲ.... ಆದರೆ ನನ್ನ ಪಾತ್ರವಿಲ್ಲ ಎಂದು ತನಿಖಾಧಿಕಾರಿಗೆ ಹೇಳಿದ್ದೇನೆ. ಜುಲೈ 23 (ಬುಧವಾರ) ರಂದು ನಾನು ಮತ್ತೊಮ್ಮೆ ಬರಬೇಕೆಂದು ಅವರು ಹೇಳಿದ್ದಾರೆ. ಬರುತ್ತೇನೆ...." ಎಂದರು.
ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, "ನನಗೆ ಯಾವ ಜಗದೀಶ್ ಕೂಡ ಗೊತ್ತಿಲ್ಲ...." ಎಂದು ಬಿಜೆಪಿ ಶಾಸಕ ತಿಳಿಸಿದರು.
ಜುಲೈ 19 ರಂದು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಶುಕ್ರವಾರ ಬೈರತಿ ಬಸವರಾಜ್ ಅವರಿಗೆ ನಿರ್ದೇಶನ ನೀಡಿದ ನಂತರ ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು.
ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಅವರನ್ನು ಬಂಧಿಸಿ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
Advertisement