ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿ ತಂಡ ಈ ಪ್ರಕರಣದ ತನಿಖೆ ನಡೆಸಲಿದೆ. ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟಿದ್ದೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಗೆ SIT ತಂಡ ರಚಿಸಬೇಕೆಂಬ ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು.
ಜಿಎಸ್‌ಟಿ ನೋಂದಾಯಿಸದೆ ಯುಪಿಐ ಮೂಲಕ 40 ಲಕ್ಷ ರೂ. ಗಿಂತ ಹೆಚ್ಚು ಹಣ ವರ್ಗಾವಣೆ ಮಾಡಿರುವ ಬೆಂಗಳೂರಿನ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ದಂಡ ಪಾವತಿಸುವಂತೆ ಸೂಚಿಸಿದೆ. ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದಿದ್ದು ನೋಟಿಸ್ ಪಡೆದಿರುವ ಸಣ್ಣ ವ್ಯಾಪಾರಿಗಳ ನೆರವಿಗೆ ಬಿಜೆಪಿ ಮುಂದಾಗಿದ್ದು, ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗಾಗಿ ಸಹಾಯವಾಣಿ (88842 45123)ಸಂಖ್ಯೆಯನ್ನು ಆರಂಭಿಸಿದೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ಗೊಂದಲ ಶುರುವಾಗಿದೆ. ಇದರ ಪರಿಹಾರೋಪಾಯಗಳನ್ನು ಸರಕಾರ ಮಾಡಬೇಕಿತ್ತು. ಆದರೆ, ರಾಜ್ಯ ಸರಕಾರ ಎಲ್ಲಿಯೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ ಮತ್ತು ವ್ಯಾಪಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಈ ನಡುವೆ ವ್ಯಾಪಾರಸ್ಥರಿಗೆ ನೋಟಿಸ್ ಕೊಟ್ಟ ಅಧಿಕಾರಿಗಳು 10,000 ಕೊಟ್ಟರೆ ನಿಮ್ಮ ಟ್ಯಾಕ್ಸ್ ಕ್ಲಿಯರ್ ಮಾಡುತ್ತೇನೆಂದು ಲಂಚಕ್ಕೆ ಬೇಡಿಕೆ ಇಟುತ್ತಿರುವ ಆರೋಪಗಳು ಕೇಳಿ ಬಂದಿದ್ದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವ್ಯಾಪಾರಸ್ಥರು ಇಂತಹ ಪ್ರಕರಣಗಳನ್ನು ತಕ್ಷಣ ವಾಣಿಜ್ಯ ತೆರಿಗೆ ಇಲಾಖೆಯ ಗಮನಕ್ಕೆ ತರಲು ಸಹಾಯವಾಣಿ ಸಂಖ್ಯೆ- 1800 425 6300 ಸಂಪರ್ಕಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಷಯವಾಗಿ ಸಿಎಂ ಪ್ರತಿಕ್ರಿಯೆ ನೀಡಿದ್ದು, ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ, ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲೇ ಇರೋದು. ತೆರಿಗೆ ಹಾಕುವುದೂ ಅವರೇ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡ್ತೀವಿ. ನಮ್ಮ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೂ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರಿನ 'ಸುಗಮ' ಆಡಳಿತಕ್ಕಾಗಿ ಬಿಬಿಎಂಪಿಯನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಗಳನ್ನಾಗಿ ವಿಭಜಿಸುವುದಾಗಿ ಪ್ರಸ್ತಾಪಿಸಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯನ್ನು ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA)ಪ್ರಧಾನ ಕಚೇರಿ ಎಂದು ಗುರುತಿಸಲಾಗುತ್ತದೆ. ಆಗಸ್ಟ್ 11 ರಿಂದ ಮುಂಗಾರು ಅಧಿವೇಶನದಲ್ಲಿ ಐದು ನಗರ ಪಾಲಿಕೆಗಳ ಬಗ್ಗೆ ಚರ್ಚೆಯೂ ಬರಲಿದ್ದು, ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಸಜ್ಜಾಗಿದೆ. ಅಧಿಸೂಚನೆ ಹೊರಡಿಸಿದ 30 ದಿನಗಳ ಒಳಗಾಗಿ ಈ ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
Advertisement