
ಹೊಸಕೋಟೆ: "ಕೇಂದ್ರ ಬಿಜೆಪಿ ಸರ್ಕಾರ ಜಿಎಸ್ ಟಿ ನೋಟಿಸ್ ನೀಡುವ ಮೂಲಕ ಸಣ್ಣ ಹಾಗೂ ಬೀದಿಬದಿ ವ್ಯಾಪಾರಿಗಳು, ಬಡವರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಹೊಸಕೋಟೆಯಲ್ಲಿ ಭಾನುವಾರ ನಡೆದ ಇ-ಸ್ವತ್ತು ಹಂಚಿಕೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
"40 ಲಕ್ಷ ರೂ. ಮೇಲೆ ವಹಿವಾಟು ಮಾಡಿದವರಿಗೆ, ತರಕಾರಿ, ಎಳನೀರು ವ್ಯಾಪಾರ ಮಾಡುತ್ತಿದ್ದವರಿಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 450 ರೂ. ಇದ್ದ ಅಡುಗೆ ಸಿಲಿಂಡರ್ ಬೆಲೆ ಈಗ 1 ಸಾವಿರ ಮುಟ್ಟಿದೆ. ಇದೇ ಕೇಂದ್ರದ ಸಾಧನೆ" ಎಂದರು.
"ಕಳೆದ ಎರಡು ವರ್ಷಗಳಿಂದ ನಾವು ಅನುದಾನಕ್ಕಾಗಿ ಅರ್ಜಿಗಳನ್ನು ನೀಡಿದ್ದೇ, ನೀಡಿದ್ದು. ಆದರೆ ಒಬ್ಬನೇ ಒಬ್ಬ ಬಿಜೆಪಿ ಸಂಸದ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅವರಿಗೆ ರಾಜ್ಯದ ಬಡ ಜನರ ಬಗ್ಗೆ ಕಾಳಜಿಯಿಲ್ಲ, ಹತ್ತು ರೂಪಾಯಿ ಬಿಚ್ಚುತ್ತಿಲ್ಲ. ಕರ್ನಾಟಕದವರು ಕೇಂದ್ರಕ್ಕೆ 100 ರೂಪಾಯಿ ಕೊಟ್ಟರೆ ನಮಗೆ ಮರಳಿ ಬರುತ್ತಿರುವುದು ಕೇವಲ 13 ರೂಪಾಯಿ ಮಾತ್ರ ಎಂದು ತರಾಟೆಗೆ ತೆಗೆದುಕೊಂಡರು.
"ನೀವು ಯಾರೂ ಸಹ ಗಾಬರಿಯಾಗಬೇಡಿ. ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ನಿಮ್ಮ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ" ಎಂದು ಹೇಳಿದರು.
"ಈ ಭಾಗಕ್ಕೆ 2027 ರ ಒಳಗೆ ಎತ್ತಿನಹೊಳೆ ನೀರು ನೀಡಬೇಕು ಎಂದು ನಾವು ಶಪಥ ಮಾಡಿದ್ದೇವೆ. ಬೆಂಗಳೂರು ಉತ್ತರ ಭಾಗಕ್ಕೆ ನೀರು ಹರಿಸುವ ಕೆಲಸ ನಾವು ಮಾಡಿಯೇ ಸಿದ್ದ. ಇಲ್ಲಿನ ಅಂತರ್ಜಲ ಹೆಚ್ಚಳ ಮಾಡಿ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂಬುದು ನಮ್ಮ ಕನಸು. ಈ ಕೆಲಸವನ್ನು ಬಿಜೆಪಿಯವರು, ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿದ್ದರೇ? ಇದೆಲ್ಲವೂ ಮೋದಿ ಅವರ ಕಾಲದಲ್ಲಿ ಆಗಿತ್ತೇ? ಇದೆಲ್ಲವೂ ಕಾಂಗ್ರೆಸ್ ಕೊಡುಗೆ" ಎಂದರು.
"ಹೊಸಕೋಟೆ ಭಾಗಕ್ಕೆ ಮೆಟ್ರೋ ಮಾರ್ಗ ತರಲು ಈಗಾಗಲೇ ಡಿಪಿಆರ್ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಅವಧಿಯೊಳಗೆ ಮೆಟ್ರೋ ಮಂಜೂರು ಕೆಲಸ ಮಾಡುತ್ತೇನೆ" ಎಂದು ಹೇಳಿದರು.
"ನಮ್ಮ ಕಾಲದಲ್ಲಿ ನಾವು ಏನು ಕೆಲಸ ಮಾಡಿದ್ದೇವೆ, ನೀವು ಏನು ಮಾಡಿದ್ದೀರಿ ಎಂದು ಸದನದಲ್ಲಿ ಮಾತನಾಡೋಣ ಬನ್ನಿ ಎಂದು ವಿಪಕ್ಷಗಳಿಗೆ ಆಹ್ವಾನ ನೀಡುತ್ತೇನೆ. ಎತ್ತಿನಹೊಳೆಯಿಂದ ನೀರು ತೆಗೆಯಲು ಆಗುವುದೇ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ಆದರೆ ಈಗ 40 ಮೀ. ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಇದು ದೇಶದ ಮಾದರಿ ಯೋಜನೆ. ಕಳೆದ ವಾರ ದೊಡ್ಡಬಳ್ಳಾಪುರ, ಕೊರಟಗೆರೆಗೆ ತೆರಳಿ ಯೋಜನೆ ಪ್ರಗತಿ ನೋಡಿಕೊಂಡು ಬಂದೆ" ಎಂದರು.
Advertisement