ಮುಡಾ ಕೇಸ್ನಸಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ನ್ನು ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಜಕಾರಣಿಗಳು ರಾಜಕೀಯ ಮಾಡಿಕೊಳ್ಳಲಿ, ಇದರಲ್ಲಿ ನಿಮಗೆ ಏನು ಕೆಲಸ ಎಂದು ಇಡಿ ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಬಾಯಿ ತೆರೆಯಲು ನಮಗೆ ಬಲವಂತ ಮಾಡಬೇಡಿ. ಇಲ್ಲದಿದ್ದರೆ ಇ.ಡಿ ಬಗ್ಗೆ ತೀಕ್ಷ್ಣ ಟಿಪ್ಪಣಿ ಮಾಡಬೇಕಾದಿತು ಎಂದು ಕೋರ್ಟ್ ಎಚ್ಚರಿಕೆ ನೀಡಿದ್ದು ಏಕಸದಸ್ಯ ಪೀಠದ ತೀರ್ಪಿನಲ್ಲಿ ನಮಗೆ ಲೋಪ ಕಂಡುಬಂದಿಲ್ಲ. ಹೀಗಾಗಿ ಇಡಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ಸಿಜೆಐ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಸಿಎಂ, ಇ.ಡಿ. ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿ ನೀಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಹಂಗಳೂರಿನಲ್ಲಿ ಭಾನುವಾರ ಅತಿ ಹೆಚ್ಚು ಅಂದರೆ 92 ಮಿಮೀ ಮಳೆಯಾಗಿದೆ. ಗದಗ ಜಿಲ್ಲೆಯಲ್ಲಿ 77.1 ಮಿಮೀ ಮಳೆಯಾಗಿದೆ, ಇದು ಜುಲೈನಲ್ಲಿ ಇದುವರೆಗಿನ ಅತಿ ಹೆಚ್ಚು ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ರೈತರೊಬ್ಬರ ಆತ್ಮಹತ್ಯೆ ಕುರಿತು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ಇಂತಹ ರಾಜಕೀಯ ಹೋರಾಟಗಳನ್ನು ನೀವು ನ್ಯಾಯಾಲಯದಿಂದ ಹೊರಗಿಟ್ಟುಕೊಳ್ಳಿ' ಎಂದು ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಸೂಚಿಸಿದ್ದಾರೆ. ರೈತನ ಆತ್ಮಹತ್ಯೆ ಬಗ್ಗೆ ತೇಜಸ್ವಿ ಸೂರ್ಯ ಅವರು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಸರ್ಕಾರ ಆರೋಪಿಸಿತ್ತು. ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ ಪೀಠ, ಕಾನೂನು ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಕೋರ್ಟ್ ಆದೇಶವನ್ನು ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದು, ಈ ತೀರ್ಪು ಒಂದು ಪಾಠವಾಗಬೇಕು ಎಂದು ಹೇಳಿದ್ದಾರೆ.
ಉತ್ತರ ಕನ್ನಡದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಇಂದು ಬೆಳಗಿನ ಜಾವ ಖಾಸಗಿ ಬಸ್ಸೊಂದು ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿಬಿದ್ದಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಗಸೂರು ಗ್ರಾಮದ ಬಳಿ ಈ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹುಬ್ಬಳ್ಳಿ ನಿವಾಸಿ ವಿನಾಯಕ ಶಿಂಧೆ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಲಕ ಅತಿವೇಗದಿಂದ ಬಸ್ ಚಲಾಯಿಸುತ್ತಿದ್ದರು ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸುವಾಗ, ನಿಯಂತ್ರಣ ಕಳೆದುಕೊಂಡು ಬಸ್ ಸೇತುವೆಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಹೊಳೆಗೆ ಬಿದ್ದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ "ತೆರಿಗೆ ನೋಟಿಸ್" ಜಾರಿ ವಿರೋಧಿಸಿ ಸಣ್ಣ ವ್ಯಾಪಾರಿಗಳು ಜುಲೈ.25 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ನಗರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಸಣ್ಣ ವ್ಯಾಪಾರಿಗಳಿಗೆ 2021 ರ ಹಿಂದಿನ 20 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳವರೆಗಿನ ತೆರಿಗೆ ನೋಟಿಸ್ ಗಳನ್ನು ಯಾವುದೇ ಪೂರ್ವ ಮಾಹಿತಿ ಅಥವಾ ವಿವರಣೆಯಿಲ್ಲದೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
Advertisement