
ಬೆಂಗಳೂರು: ರಾಜ್ಯದ ಜನರಿಗೆ ಸಿದ್ದರಾಮಯ್ಯ ಸರ್ಕಾರ ಗುರುವಾರ ಮತ್ತೊಂದು ಶಾಕ್ ನೀಡಿದ್ದು, ರಾಜ್ಯಾದ್ಯಂತ ಹೊಸದಾಗಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳಿಗೆ ಶೇ. 1 ರಷ್ಟು ಫೈರ್ ಸೆಸ್ ವಿಧಿಸಲು ನಿರ್ಧರಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ರಾಜ್ಯದಲ್ಲಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರಷ್ಟು ಫೈರ್ ಸೆಸ್ ವಿಧಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ವಾಣಿಜ್ಯ ಕಟ್ಟಡಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಕಟ್ಟಡಗಳು ಹಾಗೂ ಅಪಾರ್ಟ್ಮೆಂಟ್ಗಳು ಸೇರಿದಂತೆ ರಾಜ್ಯದ ಎಲ್ಲ ಬಹುಮಹಡಿ, ಎತ್ತರದ ಕಟ್ಟಡಗಳಿಗೆ ಶೇ. 1ರಷ್ಟು ರ ಸೆಸ್ ವಿಧಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದರು.
ಈ ಸಂಬಂಧ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ The Karnataka Fire Force Act, 1964ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕರ್ನಾಟಕ ಅಗ್ನಿಶಾಮಕ (ತಿದ್ದುಪಡಿ) ವಿಧೇಯಕ 2025 ಮಂಡಿಸಲು ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಲ್ಲಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ Fire Cess ವಿಧಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಇದೀಗ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದ್ದು, ಹೊಸ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆ ಮೇಲೆ ಶೇ. 1 ರಷ್ಟು ಅಗ್ನಿಶಾಮಕ ಸೆಸ್ ಹಾಕಲು ತೀರ್ಮಾನಿಸಲಾಗಿದೆ ಎಂದರು.
Advertisement