
ಮೈಸೂರು: ಹಾವು ಕಡಿತ ತಪ್ಪಿಸುವಿಕೆ ಮತ್ತು ನಿರ್ವಹಣೆಯ ಕುರಿತು ತನ್ನ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ(ಸಿಎಚ್‌ಒ) ಪ್ರಥಮ ಪ್ರತಿಸ್ಪಂದಕರಾಗಿ ತರಬೇತಿ ನೀಡಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ.
ಮೈಸೂರು ಜಿಲ್ಲೆಯ ಕಣ್ಗಾವಲು ಘಟಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆಯೋಜಿಸಿರುವ ಈ ತರಬೇತಿಯು ಕರ್ನಾಟಕದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಸಾರ್ವಜನಿಕ ಆರೋಗ್ಯ ಕಾಳಜಿಗಳಲ್ಲಿ ಒಂದನ್ನು ಪರಿಹರಿಸುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಮೇ 14 ರಿಂದ ಜುಲೈ 23 ರವರೆಗೆ ಜಿಲ್ಲೆಯ ಎಲ್ಲಾ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
ಲಿಯಾನಾ ಟ್ರಸ್ಟ್ ಮತ್ತು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಇಂಡಿಯಾ ಸಹಯೋಗದೊಂದಿಗೆ ಜಿಲ್ಲಾಡಳಿತವು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ(ಎಎಎಂ) ಕೆಲಸ ಮಾಡುವ ಎಲ್ಲಾ ಸಿಎಚ್‌ಒಗಳಿಗೆ ಸಿದ್ಧತೆ ಮತ್ತು ಪ್ರಥಮ ಚಿಕಿತ್ಸೆ ಸೇರಿದಂತೆ ಹಾವು ಕಡಿತಕ್ಕೆ ಪ್ರಥಮ ಪ್ರತಿಸ್ಪಂದಕರಾಗಿ ಕಾರ್ಯನಿರ್ವಹಿಸುವ ತರಬೇತಿ ನೀಡುತ್ತಿದೆ.
"ಈ ತರಬೇತಿಯು ಬಹಳ ಮುಖ್ಯ ಎಂದು ನಾನು ನಂಬುತ್ತೇನೆ, ಏಕೆಂದರೆ ಇದು ಸಾರ್ವಜನಿಕರಲ್ಲಿ ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಆ ಮೂಲಕ ಮರಣ ಹಾಗೂ ಅನಾರೋಗ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ ಪರಿಸರ ಸಮತೋಲನವನ್ನು ಖಚಿತಪಡಿಸುತ್ತದೆ" ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ನಾಗರಾಜ್ ಡಿ.ಜಿ. ಗುರುವಾರ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಇಂಡಿಯಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಟಣೆಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ವಿಷಪೂರಿತ ಹಾವು ಕಡಿತದಿಂದ ಅಂದಾಜು 58,000 ಸಾವುಗಳು ಸಂಭವಿಸುತ್ತಿವೆ ಮತ್ತು ಜೀವಕ್ಕೆ ಅಪಾಯಕಾರಿಯಾದ 2 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ.
ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ತಜ್ಞರು, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನಡೆಸಲು ಸೂಚಿಸಿದೆ. ಇದಲ್ಲದೆ, ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್‌ಫಾರ್ಮ್ (IHIP) ಪೋರ್ಟಲ್‌ನಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಂಬಂಧಿತ ಸಾವುನೋವುಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
Advertisement