
ಮೈಸೂರು: ಇಡಿ ವಿಶ್ವವೇ ಮೈಸೂರು ಸಂಸ್ಥಾನವನ್ನು ತಿರುಗಿ ನೋಡುವಂತೆ ಅಭಿವೃದ್ದಿಗೊಳಿಸಿ, ಜನಪರ ಆಡಳಿತವನ್ನು ನಡೆಸಿ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಏನೆಂಬುದು ನಮ್ಮ ಕಣ್ಣ ಮುಂದೆಯೇ ಇವೆ ಎಂದು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮೈಸೂರು ಜಿಲ್ಲೆಯವರಾದ ಸಿದ್ದರಾಮಯ್ಯನವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದರೂ ಅವರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಜನತೆ ನೋಡಿದ್ದಾರೆ. ಅದಕ್ಕೆ ಸರಿಯಾದ ಉತ್ತರವಾಗಿ 2018ರಲ್ಲೇ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಅಂದಿನ ಪರಿಸ್ಥಿತಿಯಲ್ಲಿ ನಾಲ್ವಡಿ ಮಹಾರಾಜರು ಈ ಮೈಸೂರು ಪ್ರಾಂತ್ಯದಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡು ತಮ್ಮ ದೂರದೃಷ್ಟಿಯ ಆಡಳಿತದಿಂದ ಅಕ್ಷರಶಃ ಸುವರ್ಣಯುಗವನ್ನೇ ಸೃಷ್ಟಿಸಿದ್ದರು. ಮಹನೀಯರ ಸಾಧನೆ ಗೌರವಿಸಿ ಸ್ಮರಿಸಬೇಕೆ ಹೊರತು, ಅದನ್ನು ಅಳೆದು ತೂಗಿ ಹೋಲಿಸಬಾರದು.
ಮುಖ್ಯಮಂತ್ರಿಯ ಮಗ ಎಂಬ ಕಾರಣಕ್ಕೆ ಯಂತೀಂದ್ರ ಅವರು ಏನು ಬೇಕಾದರೂ ಹೇಳಿಕೆ ನೀಡಬಾರದು. ಅವರು ಕೊಟ್ಟಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.
ಮೈಸೂರು ಸಂಸ್ಥಾನವನ್ನಾಳಿದ ಪ್ರತಿ ಮಹಾರಾಜರೂ ಈ ನೆಲದಲ್ಲಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆˌ ಅವು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಆಸರೆಯಾಗಿವೆ. ಅವುಗಳಿಗೆ, ಕೇವಲ ರಾಜಕೀಯ ಕಾರಣಕ್ಕಾಗಿ ಮಾತಿನ ಕೊಡಲಿ ಪೆಟ್ಟು ನೀಡುವ ಪ್ರಯತ್ನ ಮಾಡಬಾರದು. ಅದು ಎಂದಿಗೂ ಫಲ ಕೊಡುವುದಿಲ್ಲ. ಸಾಂವಿಧಾನಿಕ ಹಾಗೂ ಪ್ರಜಾತಂತ್ರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಯತೀಂದ್ರ ಅವರಿಗೂ ಮತ್ತು ಮುಖ್ಯಮಂತ್ರಿಯ ಗೌರವಕ್ಕೂ ಅದು ಶ್ರೇಯಸ್ಸು ತರುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಎಂದೆಂದಿಗೂ ಅಜರಾಮರರಾಗಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ನಮ್ಮ ಕಣ್ಣ ಮುಂದೆಯೇ ನಿಂತಿವೆ. ಇಂಥ ಮಹನೀಯರ ಸಾಧನೆಗಳನ್ನು ಗೌರವಿಸಿ ಸ್ಮರಿಸಬೇಕೆ ಹೊರತು ಅದನ್ನು ಅಳೆದು ತೂಗಿ ಹೋಲಿಸಬಾರದು ಎಂದಿದ್ದಾರೆ.
Advertisement