ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಮತಗಳ್ಳತನ ನಡೆದಿದೆ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಧ್ವನಿಗೂಡಿಸಿದ್ದು, ಚುನಾವಣಾ ಆಯೋಗ ನಾವು ಎತ್ತುತ್ತಿರುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಹಾಗೂ ಪರಿಸ್ಥಿತಿ ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ನಾವು ಆಯೋಗದ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮತಗಳ್ಳತನ ವಿಚಾರವಾಗಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರು ಈ ಬಗ್ಗೆ ದೊಡ್ಡ ಸಂಶೋಧನೆ ಮಾಡಿದ್ದಾರೆ." ಈ ವಿಚಾರವಾಗಿ ನಾವು ಇನ್ನೂ ಹೆಚ್ಚಿನ ದಾಖಲೆಗಳನ್ನು ಒದಗಿಸುತ್ತೇವೆ. ರಾಹುಲ್ ಗಾಂಧಿ ಅವರ ಧ್ವನಿಗೆ ನಾವೂ ಧ್ವನಿ ಸೇರಿಸುತ್ತೇವೆ" ಬೆಂಗಳೂರಿನಲ್ಲಿ ನಾನು ಸಹ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಪರಿಶೀಲಿಸಿದ್ದೇನೆ. ಒಂದು ಬೂತ್‌ನಿಂದ ಇನ್ನೊಂದು ಬೂತ್‌ಗೆ ಭಾರೀ ಪ್ರಮಾಣದಲ್ಲಿ ಮತಗಳ ವ್ಯತ್ಯಾಸ ಹಲವಾರು ಕ್ಷೇತ್ರಗಳಲ್ಲಿ ಕಂಡು ಬಂದಿದೆ. ಕ್ರಮಬದ್ದವಾಗಿ ಮತಗಟ್ಟೆಗಳಲ್ಲಿ ಹೆಸರುಗಳನ್ನು ಸೇರಿಸಿಲ್ಲ, ಅಕ್ರಮವಾಗಿ ಸೇರಿಸಲಾಗಿದೆ" ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯೂರಿಯಾ ಕೊರತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ, ಇದೇ ವೇಳೆ ರಾಜ್ಯದಲ್ಲಿ ರಸಗೊಬ್ಬರಗಳ ಕೊರತೆ ಇಲ್ಲ ಎಂದು ರಾಜ್ಯ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೂ, ಬೇಡಿಕೆ ಕಡಿಮೆಯಿರುವ ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಗೊಬ್ಬರ ವರ್ಗಾವಣೆ ಮಾಡಿ ಸರಿದೂಗಿಸಲಾಗುತ್ತಿದೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು. ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರ ಬಳಕೆಗಿಂತ ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವ ಅಗತ್ಯವಿದೆ. ಈ ಬಗ್ಗೆಯೂ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಒಂದೆಡೆ ಕರ್ನಾಟಕದಲ್ಲಿ ಸಿಎಂ ಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವೆ ಜಟಾಪಟಿ ನಡೆಯುತ್ತಿದ್ದರೆ, ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಇವರಿಬ್ಬರ ವಿಶೇಷಾಧಿಕಾರಿಗಳ ನಡುವೆ ಜಗಳ ತಾರಕಕ್ಕೇರಿದೆ. ಬೂಟಿನಿಂದ ಹೊಡೆಯಲು ಹೋಗುವ ಮಟ್ಟಕ್ಕೆ ಇದು ತಲುಪಿದೆ. ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯ ಅಧಿಕಾರಿಯೂ ಆಗಿರುವ ಕರ್ನಾಟಕ ಭವನದ ಸಹಾಯಕ ನಿವಾಸಿ ಆಯುಕ್ತ ಮೋಹನ್ ಕುಮಾರ್ ಸಿ. ಹಾಗೂ ಶಿವಕುಮಾರ್ ಅವರ ವಿಶೇಷ ಅಧಿಕಾರಿ ಎಚ್.ಆಂಜನೇಯ ನಡುವಿನ ಗಲಾಟೆಯ ದೂರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಿವಾಸಿ ಆಯುಕ್ತರಿಗೆ ತಲುಪಿದೆ. ಮೋಹನ್ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ಆಂಜನೇಯ ದೂರಿತ್ತಿದ್ದಾರೆ. ಇತರ ಸಿಬ್ಬಂದಿಗಳ ಸಮ್ಮುಖದಲ್ಲಿ ತಮ್ಮ ಬೂಟಿನಿಂದ ಹೊಡೆಯಲು ಪ್ರಯತ್ನಿಸಿದರು ಎಂದು ಡಿಸಿಎಂನ ಎಸ್‌ಡಿಒ ಎಚ್. ಆಂಜನೇಯ ಆರೋಪಿಸಿದ್ದಾರೆ.
ಬೆಂಗಳೂರು ನಗರದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ದರ್ಪಕ್ಕೆ ಬಾಡಿಗೆದಾರ ವ್ಯಕ್ತಿಯೋರ್ವ ಶಾಶ್ವತವಾಗಿ ಕಿವುಡನಾಗಿರುವ ಆರೋಪ ಕೇಳಿಬಂದಿದೆ.
ಬೇಗೂರಿನಲ್ಲಿ ಈ ಘಟನೆ ನಡೆದಿದ್ದು, PSI ಪುನೀತ್ ಮನೆ ಖಾಲಿ ಮಾಡುವ ವಿಚಾರಕ್ಕೆ ಬಾಡಿಗೆದಾರ ಉದಯ್ ಮೇಲೆ ಪುನೀತ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪಿಎಸ್‌ಐ ಕಪಾಳ ಮೋಕ್ಷಕ್ಕೆ ಉದಯ್‌ಗೆ ಕಿವಿ ಕೇಳಿಸದೆ ಶ್ರವಣ ದೋಷವಾಗಿದೆ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ಉದಯ್ ಪರ ವಕೀಲರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪಿಎಸ್‌ಐ ಮೇಲೆ ಕ್ರಮ ಆಗದ ಹಿನ್ನೆಲೆಯಲ್ಲಿ ಉದಯ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.
ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಡಿ ವಿಶ್ವವೇ ಮೈಸೂರು ಸಂಸ್ಥಾನವನ್ನು ತಿರುಗಿ ನೋಡುವಂತೆ ಅಭಿವೃದ್ದಿಗೊಳಿಸಿ, ಜನಪರ ಆಡಳಿತವನ್ನು ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಏನೆಂಬುದು ನಮ್ಮ ಕಣ್ಣ ಮುಂದೆಯೇ ಇವೆ ಎಂದು ಸಂಸದರೂ ಆಗಿರುವ ರಾಜವಂಶಸ್ಥ ಯದುವೀರ್ ಹೇಳಿದ್ದಾರೆ. ಮೈಸೂರು ಜಿಲ್ಲೆಯವರಾದ ಸಿದ್ದರಾಮಯ್ಯನವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದರೂ ಅವರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಜನತೆ ನೋಡಿದ್ದಾರೆ. ಅದಕ್ಕೆ ಸರಿಯಾದ ಉತ್ತರವಾಗಿ 2018ರಲ್ಲೇ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು
Advertisement